
ರೋಹಿತ್ ಶರ್ಮಾ (Rohit Sharma) ನಿವೃತ್ತಿ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಯ ಮುಂದೆ ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಜಸ್ಪ್ರೀತ್ ಬುಮ್ರಾ ಆಯ್ಕೆಗಳಿದ್ದವು. ಹೀಗಾಗಿ ಇವರಲ್ಲಿ ಒಬ್ಬರು ಕ್ಯಾಪ್ಟನ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು.

ಅದರಂತೆ ಇದೀಗ ಆಯ್ಕೆ ಸಮಿತಿ ಟೀಮ್ ಇಂಡಿಯಾದ ಯುವ ದಾಂಡಿಗ ಶುಭ್ಮನ್ ಗಿಲ್ಗೆ ನಾಯಕತ್ವ ನೀಡಲು ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಭವಿಷ್ಯದ ದೃಷ್ಟಿಯಿಂದ ಗಿಲ್ಗೆ ಕ್ಯಾಪ್ಟನ್ ಪಟ್ಟ ಕಟ್ಟಲು ಬಿಸಿಸಿಐ ನಿರ್ಧರಿಸಿದ್ದು, ಮೇ 23 ರಂದು ಇದರ ಅಧಿಕೃತ ಘೋಷಣೆಯಾಗಲಿದೆ.

ಇನ್ನು ಉಪನಾಯಕನಾಗಿ ಜಸ್ಪ್ರೀತ್ ಬುಮ್ರಾ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಇದೀಗ ರಿಷಭ್ ಪಂತ್ ಹೆಸರು ಕೂಡ ಮುನ್ನಲೆಗೆ ಬಂದಿದೆ. ಹೀಗಾಗಿ ವೈಸ್ ಕ್ಯಾಪ್ಟನ್ ಪಟ್ಟ ಪಂತ್ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ ಟೀಮ್ ಇಂಡಿಯಾದ ನಾಯಕ ಹಾಗೂ ಉಪನಾಯಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ಮೂಲಕ ಭಾರತದ ಪರ ನಾಯಕನಾಗಿ ಶುಭ್ಮನ್ ಗಿಲ್ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಶುಭ್ಮನ್ ಗಿಲ್ ಪಂಜಾಬ್ ರಾಜ್ಯ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಭಾರತ ಟಿ20 ಹಾಗೂ ಏಕದಿನ ತಂಡಗಳ ಉಪನಾಯಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಗಿಲ್ಗೆ ಪೂರ್ಣ ಪ್ರಮಾಣದ ಜವಾಬ್ದಾರಿವಹಿಸಲು ಬಿಸಿಸಿಐ ನಿರ್ಧರಿಸಿದ್ದು, ಅದರಂತೆ ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.