IPL 2025: ಐಪಿಎಲ್ ಪುನರಾರಂಭ: RCB ತಂಡಕ್ಕೆ ಮೊದಲ ಮ್ಯಾಚ್
IPL 2025 RCB vs LSG: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 59ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಟೂರ್ನಿಯು ಅರ್ಧದಲ್ಲೇ ಸ್ಥಗಿತಗೊಂಡಿದ್ದರಿಂದ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ಈ ಪಂದ್ಯ ಜರುಗಿರಲಿಲ್ಲ.
Updated on:May 13, 2025 | 6:41 AM

ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಯುದ್ಧ ಭೀತಿ ಹಿನ್ನಲೆ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಶನಿವಾರದಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ಸೇರಿದಂತೆ ಕೆಲ ತಂಡಗಳು ಐಪಿಎಲ್ನ ಉಳಿದ ಪಂದ್ಯಗಳಿಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಈ ಸಿದ್ಧತೆಗಳ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ.

ಅದೇನೆಂದರೆ... ಐಪಿಎಲ್ ಪುನರಾರಂಭಗೊಳ್ಳುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದೊಂದಿಗೆ ಎಂಬುದು. ಅಂದರೆ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಕಣಕ್ಕಿಳಿಯಲಿದೆ ಎಂದು ಎಎನ್ಐ ಮೂಲಗಳು ತಿಳಿಸಿವೆ. ಹೀಗಾಗಿ ಐಪಿಎಲ್ ಪುನರಾರಂಭವಾದರೆ ಮೊದಲ ಮ್ಯಾಚ್ನಲ್ಲಿ ಆರ್ಸಿಬಿ ಪಡೆ ಕಾಣಿಸಿಕೊಳ್ಳುವುದು ಖಚಿತ.

ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಾಳಿಯಾಗಿ ಕಣಕ್ಕಿಳಿಯುವುದು ಕೊಲ್ಕತ್ತಾ ನೈಟ್ ರೈಡರ್ಸ್. ಈ ಹಿಂದಿನ ವೇಳಾಪಟ್ಟಿಯಂತೆ ಐಪಿಎಲ್ನ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಇದೀಗ ಮರುನಿಗದಿಯಾಗಿರುವ ಐಪಿಎಲ್ನಲ್ಲಿ ಕೆಕೆಆರ್ ಮತ್ತು ಆರ್ಸಿಬಿಯನ್ನು ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

ಈ ಪಂದ್ಯದ ಬಳಿಕ ಆರ್ಸಿಬಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಎದುರಿಸಲಿದೆ. ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಏಕಾನ ಸ್ಟೇಡಿಯಂನಲ್ಲಿ ಆಡಿದ್ರೆ, ಕೆಕೆಆರ್ ಹಾಗೂ ಎಸ್ಆರ್ಹೆಚ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ.

ಇನ್ನು ಈ ಬಾರಿಯ ಫೈನಲ್ ಪಂದ್ಯವನ್ನು ಜೂನ್ 3 ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಖೂ ಮುನ್ನ ಫೈನಲ್ ಪಂದ್ಯವನ್ನು ಮೇ 25 ರಂದು ನಡೆಸಲು ನಿರ್ಧರಿಸಲಾಗಿತ್ತು. ಇದೀಗ ವೇಳಾಪಟ್ಟಿ ಬದಲಾದ ಕಾರಣ ಅಂತಿಮ ಪಂದ್ಯವು ಜೂನ್ 3 ರಂದು ನಡೆಯಲಿದೆ. ಇತ್ತ ಆರ್ಸಿಬಿ ತಂಡವು 8 ವರ್ಷಗಳ ಬಳಿಕ ಫೈನಲ್ಗೇರುವ ತವಕದಲ್ಲಿದ್ದು, ಅದರಂತೆ ಈ ಬಾರಿಯಾದರೂ ಆರ್ಸಿಬಿ ಪಡೆ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.
Published On - 8:30 am, Mon, 12 May 25
