
ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ 2026 ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮೊದಲು ನಡೆದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗಿಲ್, ಆಯ್ಕೆದಾರರ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ಮತ್ತು ಪಂದ್ಯಾವಳಿಯಲ್ಲಿ ತಂಡದ ಯಶಸ್ಸನ್ನು ಹಾರೈಸುವುದಾಗಿ ಹೇಳಿದರು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟಿ20 ವಿಶ್ವಕಪ್ ತಂಡದ ಆಯ್ಕೆಯ ಕುರಿತು ಮಾತನಾಡಿದ ಶುಭಮನ್ ಗಿಲ್, ‘ನಾನು ಆಯ್ಕೆದಾರರ ನಿರ್ಧಾರವನ್ನು ಗೌರವಿಸುತ್ತೇನೆ. ಟಿ20 ವಿಶ್ವಕಪ್‌ಗಾಗಿ ತಂಡಕ್ಕೆ ಶುಭ ಹಾರೈಸುತ್ತೇನೆ. ನನ್ನ ಹಣೆಬರಹದಲ್ಲಿ ಬರೆದಿರುವುದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬ ಆಟಗಾರ ಯಾವಾಗಲೂ ದೇಶಕ್ಕಾಗಿ ತನ್ನ ಕೈಲಾದಷ್ಟು ಮಾಡಲು ಬಯಸುತ್ತಾನೆ ಎಂದಿದ್ದಾರೆ.

ವಾಸ್ತವವಾಗಿ ಗಿಲ್ಗೆ ಟಿ20 ಮಾದರಿಯಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆದರೆ ಈ ಮಾದರಿಯಲ್ಲಿ ಗಿಲ್ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಿಶೇಷವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಯಲ್ಲಿ ಗಿಲ್ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು, ಈ ಸರಣಿಯಲ್ಲಿ ಗಿಲ್ ಕ್ರಮವಾಗಿ 4, 4, 0 ಮತ್ತು 28 ರನ್ ಕಲೆಹಾಕಿದರು.

ಇದಲ್ಲದೆ 2025 ರಲ್ಲಿ ಆಡಿದ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಿಲ್ಗೆ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ವರ್ಷದುದ್ದಕ್ಕೂ 15 ಅಂತರರಾಷ್ಟ್ರೀಯ ಟಿ20ಪಂದ್ಯಗಳನ್ನು ಆಡಿದ ಶುಭ್ಮನ್ ಗಿಲ್ 24.25 ರ ಸರಾಸರಿಯಲ್ಲಿ ಕೇವಲ 219 ರನ್ ಕಲೆಹಾಕಿದರು. ಅವರ ಸ್ಟ್ರೈಕ್ ರೇಟ್ ಕೂಡ ಕೇವಲ 137.26 ಆಗಿತ್ತು.

ಇನ್ನು ಶುಭ್ಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ಬಗ್ಗೆ ಮಾತನಾಡಿದ್ದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ‘ಗಿಲ್ ಅವರ ಇತ್ತೀಚಿನ ಫಾರ್ಮ್ ಮತ್ತು ತಂಡದ ಸಂಯೋಜನೆಯ ದೃಷ್ಟಿಯಿಂದ ಅವರನ್ನು ಹೊರಗಿಡಲಾಗಿದೆ. ಗಿಲ್ ಎಂತಹ ಗುಣಮಟ್ಟದ ಆಟಗಾರ ಎಂದು ನಮಗೆ ತಿಳಿದಿದೆ, ಆದರೆ ಅವರ ಪ್ರಸ್ತುತ ಫಾರ್ಮ್ ತಂಡದಿಂದ ಹೊರಗಿಡುವಂತೆ ಮಾಡಿದೆ. ಅಲ್ಲದೆ ಟಿ20 ವಿಶ್ವಕಪ್‌ಗೆ 15 ಆಟಗಾರರನ್ನು ಆಯ್ಕೆ ಮಾಡಬೇಕಿರುವ ಕಾರಣ ಗಿಲ್ರನ್ನು ಆಯ್ಕೆಗೆ ಪರಿಗಣಿಸಲು ಸಾಧ್ಯವಾಗಲಿಲ್ಲ ಎಂದಿದ್ದರು.