ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ ಅವರ ಕಳಪೆ ಫಾರ್ಮ್ನಿಂದ ಟೀಮ್ ಇಂಡಿಯಾ ಚಿಂತೆಗೀಡಾಗಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭಾರತ ತಂಡಕ್ಕೆ ಆಧಾರಸ್ತಂಭವಾಗಬೇಕಿದ್ದ ಗಿಲ್ ಹೋದ ಬೆನ್ನಲ್ಲೇ ಪೆವಿಲಿಯನ್ಗೆ ಹಿಂತಿರುಗುತ್ತಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 23 ರನ್ ಬಾರಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದರ ಬೆನ್ನಲ್ಲೇ ಶುಭ್ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು.
ಇದಕ್ಕೆ ಮುಖ್ಯ ಕಾರಣ ಗಿಲ್ ಅವರ ಕಳಪೆ ಪ್ರದರ್ಶನ. ಶುಭ್ಮನ್ ಕೊನೆಯ 10 ಇನಿಂಗ್ಸ್ಗಳಲ್ಲಿ ಒಂದೇ ಅರ್ಧಶತಕ ಬಾರಿಸಿಲ್ಲ. ಅಂದರೆ ಕೊನೆಯ ಹತ್ತು ಇನಿಂಗ್ಸ್ಗಳಲ್ಲಿ ಕ್ರಮವಾಗಿ 47, 6, 10, 29*, 2, 26, 36, 10, 23, 0 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿಯೇ ಗಿಲ್ ಆಯ್ಕೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ಈ ಪ್ರಶ್ನೆಗಳ ನಡುವೆ ಶುಭ್ಮನ್ ಗಿಲ್ ಕಳೆದ ವರ್ಷ ಶತಕ ಬಾರಿಸಿದ್ದರು ಎಂಬ ವಿಚಾರ ಕೂಡ ಮುನ್ನಲೆಗೆ ಬಂದಿವೆ. 2023 ರ ಮಾರ್ಚ್‌ನಲ್ಲಿ ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗಿಲ್ 128 ರನ್ ಸಿಡಿಸಿದ್ದರು. ಆದರೆ ಈ ಮೂರಂಕಿ ಇನಿಂಗ್ಸ್ ಬಳಿಕ ಗಿಲ್ ಸತತ ವೈಫಲ್ಯ ಅನುಭವಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ, ಶುಭ್ಮನ್ ಗಿಲ್ ಅಹಮದಾಬಾದ್ ಪಿಚ್ನಲ್ಲಿ ಮಾತ್ರ ಚೆನ್ನಾಗಿ ಆಡುತ್ತಾರೆ ಎಂಬ ಅಪವಾದ ಆಗಾಗ್ಗೆ ಕೇಳಿ ಬರುತ್ತಿರುವುದು. ಈ ಆರೋಪ ನಿಜ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಭ್ಮನ್ ಗಿಲ್ 51ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅದೇ ಇತರೆ ಪಿಚ್ಗಳಲ್ಲಿ ಗಿಲ್ ಅವರ ಸರಾಸರಿ ರನ್ಗಳಿಕೆ 30 ದಾಟಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಹಮದಾಬಾದ್ ಪಿಚ್ನಲ್ಲಿ ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ 51.33 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಹಾಗೆಯೇ ಟಿ20ಐ ಕ್ರಿಕೆಟ್ನಲ್ಲಿ 126 ರ ಸರಾಸರಿ ಹೊಂದಿದ್ದರೆ, ಐಪಿಎಲ್ನಲ್ಲಿ 66.9 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.
ಆದರೆ ಇತರೆ ಪಿಚ್ನಲ್ಲಿ ಗಿಲ್ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ ಕೇವಲ 27.54 ರನ್ಗಳು. ಇನ್ನು ಟಿ20 ಕ್ರಿಕೆಟ್ನಲ್ಲಿ 16.07 ಹಾಗೂ ಐಪಿಎಲ್ನಲ್ಲಿ 33.14 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅಂದರೆ ಅಹಮದಾಬಾದ್ ಪಿಚ್ ಅನ್ನು ಹೊರತುಪಡಿಸಿ ಗಿಲ್ ಇತರೆ ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಸ್ಪಷ್ಟ. ಹೀಗಾಗಿಯೇ ಶುಭ್ಮನ್ ಗಿಲ್ ಅವರನ್ನು ಅಹದಾಬಾದ್ನ ಹುಲಿ, ಇತರೆಡೆ____ಎಂದು ಗೇಲಿ ಮಾಡಲಾಗುತ್ತಿದೆ.