Sikandar Raza: 8 ಭರ್ಜರಿ ಸಿಕ್ಸ್, 6 ಫೋರ್: ತೂಫಾನ್ ಶತಕ ಸಿಡಿಸಿ ದಾಖಲೆ ಬರೆದ ಸಿಕಂದರ್ ರಾಝ
ICC World Cup Qualifiers 2023: ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ತಂಡಕ್ಕೆ ವಿಕ್ರಮಜಿತ್ ಸಿಂಗ್ (88) ಹಾಗೂ ಮ್ಯಾಕ್ಸ್ ಒಡೌಡ್ (59) ಭರ್ಜರಿ ಆರಂಭ ಒದಗಿಸಿದ್ದರು.
Updated on: Jun 20, 2023 | 9:23 PM

ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡದ ಸಿಕಂದರ್ ರಾಝ (Sikandar Raza) ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ತಂಡಕ್ಕೆ ವಿಕ್ರಮಜಿತ್ ಸಿಂಗ್ (88) ಹಾಗೂ ಮ್ಯಾಕ್ಸ್ ಒಡೌಡ್ (59) ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 120 ರನ್ ಪೇರಿಸಿದ್ದ ಈ ಜೋಡಿ ಜೊತೆಯಾಟವನ್ನು ಮುರಿಯುವಲ್ಲಿ ಕೊನೆಗೂ ಸಿಕಂದರ್ ರಾಝ ಯಶಸ್ವಿಯಾದರು.

ಆ ಬಳಿಕ ಬಂದ ನಾಯಕ ಎಡ್ವರ್ಡ್ಸ್ 72 ಎಸೆತಗಳಲ್ಲಿ 8 ಫೋರ್ನೊಂದಿಗೆ 83 ರನ್ ಚಚ್ಚಿದರು. ಈ ಮೂಲಕ ನೆದರ್ಲ್ಯಾಂಡ್ಸ್ ತಂಡವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 315 ರನ್ ಕಲೆಹಾಕಿತು. ಝಿಂಬಾಬ್ವೆ ಪರ ಸಿಕಂದರ್ ರಾಝ 4 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು 316 ರನ್ಗಳ ಬೃಹತ್ ಗುರಿ ಪಡೆದ ಝಿಂಬಾಬ್ವೆ ಕ್ರೇಗ್ ಇರ್ವಿನ್ (50) ಹಾಗೂ ಜಾಯ್ಲಾರ್ಡ್ (40) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೀನ್ ವಿಲಿಯಮ್ಸನ್ ಕೇವಲ 58 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 10 ಫೋರ್ನೊಂದಿಗೆ 91 ರನ್ ಬಾರಿಸಿದರು. ಇದರ ನಡುವೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿಕಂದರ್ ರಾಝ ಅಕ್ಷರಶಃ ಅಬ್ಬರಿಸಿದರು.

ನೆದರ್ಲ್ಯಾಂಡ್ಸ್ ಬೌಲರ್ಗಳು ಹಿಗ್ಗಾಮುಗ್ಗಾ ದಂಡಿಸಿದ ರಾಝ ಸಿಕ್ಸ್ಗಳ ಸುರಿಮಳೆಗೈದರು. ಅಲ್ಲದೆ ಕೇವಲ 54 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಸಿಕಂದರ್ ರಾಝ (102) ಅಜೇಯ ಶತಕ ಸಿಡಿಸಿದರು. ಅಲ್ಲದೆ ಕೇವಲ 40.5 ಓವರ್ಗಳಲ್ಲಿ 319 ರನ್ಗಳಿಸುವ ಸಿಕಂದರ್ ರಾಝ ಝಿಂಬಾಬ್ವೆ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.

ಇನ್ನು ಕೇವಲ 54 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಝಿಂಬಾಬ್ವೆ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ದಾಖಲೆಯನ್ನೂ ಕೂಡ ಸಿಕಂದರ್ ರಾಝ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಸೀನ್ ವಿಲಿಯಮ್ಸ್ ಹೆಸರಿನಲ್ಲಿತ್ತು. ಜೂನ್ 18 ರಂದು ವಿಲಿಯಮ್ಸ್ ನೇಪಾಳ ವಿರುದ್ಧ ಕೇವಲ 70 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು.

ಇದೀಗ ಕೇವಲ 2 ದಿನಗಳಲ್ಲಿ ಈ ದಾಖಲೆಯನ್ನು ಅಳಿಸಿ ಹಾಕಿ ಸಿಕಂದರ್ ರಾಝ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡರು.
























