ದಾಖಲೆಗಳ ಮೇಲೆ ದಾಖಲೆ ಬರೆದ ಸ್ಮೃತಿ ಮಂಧಾನ
England Women vs India Women: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡವು ಸ್ಮೃತಿ ಮಂಧಾನ ಅವರ ಶತಕದ ನೆರವಿನೊಂದಿಗ 20 ಓವರ್ಗಳಲ್ಲಿ 210 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 14.5 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 97 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
Updated on: Jun 29, 2025 | 7:30 AM

ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಟೀಮ್ ಇಂಡಿಯಾದ ಹಂಗಾಮಿ ನಾಯಕಿ ಸ್ಮೃತಿ ಮಂಧಾನ (Smriti Mandhana). ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ ಆರಂಭಿಕಳಾಗಿ ಕಣಕ್ಕಿಳಿದಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸ್ಮೃತಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಂಗ್ಲ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಟೀಮ್ ಇಂಡಿಯಾ ನಾಯಕಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳನ್ನು ಬಾರಿಸಿದರು. ಈ ಮೂಲಕ 62 ಎಸೆತಗಳಲ್ಲಿ 15 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 112 ರನ್ ಕಲೆಹಾಕಿದ್ದಾರೆ. ಈ ಶತಕದೊಂದಿಗೆ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಸೆಂಚುರಿ ಸರದಾರಿಣಿ: ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ (ಟೆಸ್ಟ್, ಏಕದಿನ, ಟಿ20) ಶತಕ ಬಾರಿಸಿದ ಏಕೈಕ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ಸ್ಮೃತಿ ನಿರ್ಮಿಸಿದ್ದಾರೆ. ಸ್ಮೃತಿ ಮಂಧಾನ ಅವರನ್ನು ಹೊರತುಪಡಿಸಿ ಭಾರತದ ಪರ ಯಾವುದೇ ಮಹಿಳಾ ಬ್ಯಾಟರ್ ಮೂರೂ ಸ್ವರೂಪಗಳಲ್ಲಿ ಸೆಂಚುರಿ ಬಾರಿಸಿಲ್ಲ.

ಭರ್ಜರಿ ಸೆಂಚುರಿ: ಟೀಮ್ ಇಂಡಿಯಾ ಪರ ಮಹಿಳಾ ಕ್ರಿಕೆಟ್ನಲ್ಲಿ ಟಿ20 ಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹರ್ಮನ್ಪ್ರೀತ್ ಕೌರ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು.

ಗರಿಷ್ಠ ಸ್ಕೋರ್: ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಹರ್ಮನ್ಪ್ರೀತ್ ಕೌರ್ ಹೆಸರಿನಲ್ಲಿತ್ತು. 2018 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಹರ್ಮನ್ಪ್ರೀತ್ 103 ರನ್ ಬಾರಿಸಿದ್ದರು. ಇದೀಗ 112 ರನ್ಗಳೊಂದಿಗೆ ಸ್ಮೃತಿ ಮಂಧಾನ ಈ ದಾಖಲೆ ಮುರಿದಿದ್ದಾರೆ.

ವಿಶ್ವ ದಾಖಲೆ: ಮಹಿಳಾ ಕ್ರಿಕೆಟ್ನಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನೂ ಸಹ ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹೀದರ್ ನೈಟ್ (ಇಂಗ್ಲೆಂಡ್), ಟ್ಯಾಮಿ ಬ್ಯೂಮಾಂಟ್ (ಇಂಗ್ಲೆಂಡ್), ಲಾರಾ ವೋಲ್ವಾರ್ಡ್ (ಸೌತ್ ಆಫ್ರಿಕಾ) ಮತ್ತು ಬೆತ್ ಮೂನಿ (ಆಸ್ಟ್ರೇಲಿಯಾ) ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಮೊದಲ ಭಾರತೀಯಳಾಗಿ ಸ್ಮೃತಿ ಮಂಧಾನ ಎಂಟ್ರಿ ಕೊಟ್ಟಿದ್ದಾರೆ.

ಅತ್ಯಧಿಕ ರನ್: ಮಹಿಳಾ ಟಿ20 ಇನಿಂಗ್ಸ್ನಲ್ಲಿ ಬೌಂಡರಿಗಳ ಮೂಲಕ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸಹ ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 15 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ ಸ್ಮೃತಿ ಒಟ್ಟು 78 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.




