Star Sports IPL Incredible Awards: ಜನಪ್ರಿಯ ಕ್ರೀಡಾ ಚಾನೆಲ್ ನೆಟ್ವರ್ಕ್ ಸ್ಟಾರ್ ಸ್ಪೋರ್ಟ್ಸ್ ಇದೇ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2008 ರಲ್ಲಿ ಶುರುವಾದ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 15 ವರ್ಷಗಳನ್ನು ಪೂರ್ಣಗೊಳಿಸಿದೆ. ಈ 15 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಇನ್‌ಕ್ರೆಡಿಬಲ್ ಅವಾರ್ಡ್ಗಳನ್ನು ಘೋಷಿಸಿದೆ. ಈ ಪ್ರಶಸ್ತಿಗಳನ್ನು ಪಡೆದಿರುವ ಆಟಗಾರರ ಸಂಪೂರ್ಣ ವಿವರಗಳು ಈ ಕೆಳಗಿನಂತಿದೆ.
ಅತ್ಯುತ್ತಮ ನಾಯಕ ಪ್ರಶಸ್ತಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯುತ್ತಮ ನಾಯಕ ಪ್ರಶಸ್ತಿಯು ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಲಭಿಸಿದೆ. ಕಳೆದ 15 ವರ್ಷಗಳಲ್ಲಿ ಮುಂಬೈ ತಂಡವನ್ನು ಹಿಟ್ಮ್ಯಾನ್ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹೀಗಾಗಿ ಐಪಿಎಲ್ನ ಅತ್ಯುತ್ತಮ ನಾಯಕನ ಪ್ರಶಸ್ತಿಯು ರೋಹಿತ್ ಶರ್ಮಾ ಪಾಲಾಗಿದೆ.
ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ: ಐಪಿಎಲ್ ಇತಿಹಾಸದ ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯು ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಪಾಲಾಗಿದೆ. ಐಪಿಎಲ್ನ 170 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿರುವ ಎಬಿಡಿ 151.69 ಸ್ಟ್ರೈಕ್ ರೇಟ್ನಲ್ಲಿ 5162 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಶತಕ ಹಾಗೂ 40 ಅರ್ಧಶತಕಗಳನ್ನು ಬಾರಿಸಿದ್ದರು. ಅದರಲ್ಲೂ ಹಲವು ಪಂದ್ಯಗಳಿಗೆ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಹೀಗಾಗಿಯೇ ಐಪಿಎಲ್ನ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿಯು ಎಬಿಡಿಗೆ ಒಲಿದಿದೆ.
ಅತ್ಯುತ್ತಮ ಬೌಲರ್ ಪ್ರಶಸ್ತಿ: ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದೇ ಕಾರಣದಿಂದಾಗಿ ಐಪಿಎಲ್ನ ಅತ್ಯುತ್ತಮ ಬೌಲರ್ ಪ್ರಶಸ್ತಿ ಕೂಡ ಬುಮ್ರಾಗೆ ಒಲಿದಿದೆ. 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಜಸ್ಪ್ರೀತ್ ಬುಮ್ರಾ ಇದುವರೆಗೆ ಒಟ್ಟು 145 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿ: 15 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಪ್ರಭಾವ ಬೀರಿದ ಆಟಗಾರರಿಗೆ ನೀಡಲಾಗುವ ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿಯು ಕೆಕೆಆರ್ ತಂಡದ ಆಲ್ರೌಂಡರ್ ಆಟಗಾರ ಆ್ಯಂಡ್ರೆ ರಸೆಲ್ ಪಾಲಾಗಿದೆ. ರಸೆಲ್ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಮಿಂಚುವ ಮೂಲಕ ಐಪಿಎಲ್ನ ಅತ್ಯುತ್ತಮ ಇಂಪ್ಯಾಕ್ಟ್ ಪ್ಲೇಯರ್ ಎನಿಸಿಕೊಂಡಿದ್ದಾರೆ.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಪ್ರಶಸ್ತಿ: ಐಪಿಎಲ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಬೌಲರ್ಗೆ ನೀಡಲಾಗುವ ಪ್ರಶಸ್ತಿಯು ಕೆಕೆಆರ್ ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಪಾಲಾಗಿದೆ. 2012 ರಲ್ಲಿ ನರೈನ್ 5.5 ಸರಾಸರಿಯಲ್ಲಿ ರನ್ ನೀಡಿ ಮೂಲಕ 24 ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನಕ್ಕೆ ಇದೀಗ ಪ್ರಶಸ್ತಿ ಒಲಿದಿದೆ.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಪ್ರಶಸ್ತಿ: ಕಳೆದ 15 ವರ್ಷಗಳಲ್ಲಿ ಸೀಸನ್ವೊಂದರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರರಿಗೆ ನೀಡಲಾಗುವ ಪ್ರಶಸ್ತಿಯು ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿಯ ಪಾಲಾಗಿದೆ. 2016 ರ ಐಪಿಎಲ್ ಸೀಸನ್ನಲ್ಲಿ ಕಿಂಗ್ ಕೊಹ್ಲಿಯು 4 ಶತಕಗಳೊಂದಿಗೆ 973 ರನ್ ಕಲೆಹಾಕಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಇದೀಗ ಸ್ಟಾರ್ ಸ್ಪೋರ್ಟ್ಸ್ ಪ್ರಶಸ್ತಿ ಒಲಿದಿದೆ.
Published On - 7:23 pm, Mon, 20 February 23