Updated on: Jun 08, 2023 | 3:57 PM
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಶತಕ ಬಾರಿಸಿದ್ದಾರೆ.
ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ ಅತ್ಯುತ್ತಮ ರಕ್ಷಣಾತ್ಮಕ ಆಟದೊಂದಿಗೆ ಗಮನ ಸೆಳೆದಿದ್ದರು. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲರ್ಗಳನ್ನು ಕಾಡಿದ್ದ ಸ್ಮಿತ್ 227 ಎಸೆತಗಳಲ್ಲಿ 95 ರನ್ಗಳಿಸಿ ಅಜೇಯರಾಗಿ ಉಳಿದಿದ್ದರು.
2ನೇ ದಿನದಾಟದ 2ನೇ ಎಸೆತದಲ್ಲೇ ಫೋರ್ ಬಾರಿಸಿದ ಸ್ಟೀವ್ ಸ್ಮಿತ್ ಮತ್ತೊಂದು ರನ್ ಕಲೆಹಾಕುವ ಮೂಲಕ 229 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದರು. ಇದರೊಂದಿಗೆ ಟೀಮ್ ಇಂಡಿಯಾ ವಿರುದ್ಧ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಪಾಂಟಿಂಗ್ ಟೀಮ್ ಇಂಡಿಯಾ ವಿರುದ್ಧ ಒಟ್ಟು 8 ಟೆಸ್ಟ್ ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದರು.
ಇದೀಗ 9ನೇ ಶತಕದೊಂದಿಗೆ ಭಾರತದ ವಿರುದ್ದ ಅತೀ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಸೀಸ್ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿರುವ ಇಂಗ್ಲೆಂಡ್ನ ಜೋ ರೂಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಜೋ ರೂಟ್ ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 9 ಶತಕಗಳನ್ನು ಬಾರಿಸಿದ್ದಾರೆ. ಇದೀಗ ಓವಲ್ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಂಚುರಿ ಸಿಡಿಸಿ ಜೋ ರೂಟ್ ಅವರ 9 ಶತಕಗಳ ದಾಖಲೆಯನ್ನು ಸ್ಮಿತ್ ಸರಿಗಟ್ಟಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಸ್ಮಿತ್ಗೂ ಮುನ್ನ ಟ್ರಾವಿಸ್ ಹೆಡ್ ಶತಕ ಬಾರಿಸಿದ್ದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಹೆಡ್ ಸ್ಪೋಟಕ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದ್ದರು. ಅಲ್ಲದೆ ಕೇವಲ 106 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು.
ಇದೀಗ ಸ್ಮಿತ್ ಹಾಗೂ ಹೆಡ್ ಅವರ ಜುಗಲ್ಬಂಧಿಯೊಂದಿಗೆ ಆಸ್ಟ್ರೇಲಿಯಾ ತಂಡವು 90 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 351 ರನ್ ಕಲೆಹಾಕಿದೆ.