Updated on: May 28, 2023 | 2:30 PM
T20 Records: ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆದ ಟಿ20 ಬ್ಲಾಸ್ಟ್ ಲೀಗ್ನಲ್ಲಿ ಕೆಂಟ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಶಾನ್ ಅಬಾಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೇವಲ 34 ಎಸೆತಗಳಲ್ಲಿ ಸೆಂಚುರಿ ಪೂರೈಸಿ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಟಾಪ್-5 ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಶೇಷ ಎಂದರೆ ಟಿ20 ಕ್ರಿಕೆಟ್ನಲ್ಲಿ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿರುವುದು ಕೇವಲ 5 ಬ್ಯಾಟರ್ಗಳು ಮಾತ್ರ. ಈ ಪಟ್ಟಿಯಲ್ಲಿ ಇದೀಗ ಅಬಾಟ್ ಕೂಡ ಸ್ಥಾನ ಪಡೆದಿರುವುದು ವಿಶೇಷ. ಹಾಗಿದ್ರೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಶತಕ ಬಾರಿಸಿದ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡೋಣ...
1- ಕ್ರಿಸ್ ಗೇಲ್: ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದುವೇ ಟಿ20 ಕ್ರಿಕೆಟ್ನ ಅತ್ಯಂತ ವೇಗದ ಶತಕ ದಾಖಲೆಯಾಗಿದೆ.
2- ರಿಷಭ್ ಪಂತ್: 2018 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧ ದೆಹಲಿ ಪರ ಕಣಕ್ಕಿಳಿದಿದ್ದ ರಿಷಭ್ ಪಂತ್ ಕೇವಲ 32 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಪಂತ್ ಪಾಲಾಯಿತು.
3- ವಿಹಾನ್ ಲಬ್ಬ್: 2018 ರಲ್ಲಿ ಸೌತ್ ಆಫ್ರಿಕಾ ಟಿ20 ಕ್ರಿಕೆಟ್ನಲ್ಲಿ ನಾರ್ತ್ ವೆಸ್ಟ್ ಪರ ಕಣಕ್ಕಿಳಿದ್ದ ವಿಹಾನ್ ಲಬ್ಬ್ ಲಿಂಪೊಪೊ ತಂಡದ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದರು.
4- ಆಂಡ್ರ್ಯೂ ಸೈಮಂಡ್ಸ್: 2004 ರಲ್ಲಿ ಮಿಡ್ಲ್ಸೆಕ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಕೆಂಟ್ ಪರ ಆಡಿದ್ದ ಸೈಮಂಡ್ಸ್ ಕೇವಲ 34 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು.
5- ಶಾನ್ ಅಬಾಟ್: 2023 ರ ಟಿ20 ಬ್ಲಾಸ್ಟ್ ಲೀಗ್ನಲ್ಲಿ ಕೆಂಟ್ ವಿರುದ್ಧದ ಪಂದ್ಯದಲ್ಲಿ ಸರ್ರೆ ಪರ ಕಣಕ್ಕಿಳಿದ ಶಾನ್ ಅಬಾಟ್ ಕೇವಲ 34 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಮೂಲಕ ಸೈಮಂಡ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
6- ಡೇವಿಡ್ ಮಿಲ್ಲರ್: 2017 ರಲ್ಲಿ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಡೇವಿಡ್ ಮಿಲ್ಲರ್ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು.
7- ರೋಹಿತ್ ಶರ್ಮಾ: 2017 ರಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು.