Updated on:May 29, 2023 | 2:57 AM
WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾಗೆ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೀಸಲು ಆಟಗಾರನಾಗಿ ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ನ ಓವಲ್ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಈ ಹಿಂದೆ ರುತುರಾಜ್ ಗಾಯಕ್ವಾಡ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು.
ಆದರೀಗ ರುತುರಾಜ್ ಗಾಯಕ್ವಾಡ್ ವೈಯುಕ್ತಿಕ ಕಾರಣಗಳಿಂದಾಗಿ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಬದಲಿ ಮೀಸಲು ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಜೂನ್ 7 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಫೈನಲ್ ಪಂದ್ಯಕ್ಕಾಗಿ ಈಗಾಗಲೇ ಟೀಮ್ ಇಂಡಿಯಾ ಪ್ರಮುಖ ಆಟಗಾರರು ಇಂಗ್ಲೆಂಡ್ಗೆ ಪ್ರಯಾಣಿಸಿದ್ದಾರೆ. ಇನ್ನು ಐಪಿಎಲ್ ಫೈನಲ್ ಪಂದ್ಯದ ಬಳಿಕ ಇತರೆ ಆಟಗಾರರು ತೆರಳಲಿದ್ದಾರೆ.
ಹಾಗೆಯೇ ಮೀಸಲು ಆಟಗಾರರಾಗಿ ಸೂರ್ಯಕುಮಾರ್ ಯಾದವ್, ಮುಖೇಶ್ ಕುಮಾರ್ ಹಾಗೂ ರುತುರಾಜ್ ಗಾಯಕ್ವಾಡ್ ತಂಡವನ್ನು ಸೇರಿಕೊಳ್ಳಬೇಕಿತ್ತು. ಆದರೀಗ ವೈಯುಕ್ತಿಕ ಕಾರಣಗಳಿಂದಾಗಿ ರುತುರಾಜ್ ಹಿಂದೆ ಸರಿದಿದ್ದಾರೆ.
ಇತ್ತ ರುತುರಾಜ್ ಗಾಯಕ್ವಾಡ್ ಹೊರಗುಳಿಯುತ್ತಿದ್ದಂತೆ ಕೋಚ್ ರಾಹುಲ್ ದ್ರಾವಿಡ್ ಅವರು ಬದಲಿ ಆಟಗಾರನನ್ನು ಆಯ್ಕೆ ಮಾಡುವಂತೆ ಆಯ್ಕೆದಾರರಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅದೃಷ್ಟ ಖುಲಾಯಿಸಿದ್ದು, ಶೀಘ್ರದಲ್ಲೇ ಅವರು ಲಂಡನ್ಗೆ ತೆರಳಲಿದ್ದಾರೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬೈ ಮೂಲದ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಲ್ಲಿ 48.08 ಸರಾಸರಿಯಲ್ಲಿ 625 ರನ್ ಗಳಿಸಿ ಮಿಂಚಿದ್ದರು.
ಹಾಗೆಯೇ ಕಳೆದ ಸೀಸನ್ ರಣಜಿ ಟ್ರೋಫಿಯಲ್ಲಿ ಜೈಸ್ವಾಲ್ 5 ಪಂದ್ಯಗಳಲ್ಲಿ 404 ರನ್ ಗಳಿಸಿ ಅಬ್ಬರಿಸಿದ್ದರು. ಹೀಗಾಗಿ ಎಡಗೈ ದಾಂಡಿಗನನ್ನು ಮೀಸಲು ಆಟಗಾರನಾಗಿ ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್).
Published On - 3:08 pm, Sun, 28 May 23