ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ ಫಲಿತಾಂಶ ಏನಾಗಲಿದೆ ಎಂಬ ಆತಂಕವೊಂದು ಕ್ರಿಕೆಟ್ ಪ್ರೇಮಿಗಳಲ್ಲಿದೆ.
ಏಕೆಂದರೆ ಭಾರತ-ಐರ್ಲೆಂಡ್ ನಡುವಣ ಪಂದ್ಯವು ಮಳೆಯ ಕಾರಣ ಸ್ಥಗಿತವಾಗಿತ್ತು. ಇದಾಗ್ಯೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಿದ್ದರಿಂದ ಟೀಮ್ ಇಂಡಿಯಾ 5 ರನ್ಗಳ ರೋಚಕ ಜಯದೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಿದೆ.
ಇದೀಗ ಸೆಮಿಫೈನಲ್ ಪಂದ್ಯದ ವೇಳೆ ಮಳೆಯಾದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯದ ವೇಳೆ ಮೀಸಲು ದಿನ ನೀಡಲಾಗುತ್ತದೆ. ಆದರೆ ಮಹಿಳಾ ಟಿ20 ವಿಶ್ವಕಪ್ನಲ್ಲಿ ಯಾವುದೇ ಮೀಸಲು ದಿನವನ್ನು ಘೋಷಿಸಿಲ್ಲ.
ಇದಾಗ್ಯೂ ಈ ನಿಯಮವನ್ನು ಜಾರಿಗೊಳಿಸಿದರೆ, ಸೆಮಿಫೈನಲ್ ಪಂದ್ಯವನ್ನು ಮರುದಿನಕ್ಕೆ ಮುಂದೂಡಬಹುದು. ಒಂದು ವೇಳೆ ಪಂದ್ಯ ನಡೆಯುತ್ತಿದ್ದ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಿರಬೇಕಾಗುತ್ತದೆ. ಉಭಯ ತಂಡಗಳು 20 ಓವರ್ ಆಡಿದ್ದರೆ ಮಾತ್ರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ. ಇನ್ನು ಎರಡು ತಂಡಗಳು 10 ಕ್ಕಿಂತ ಕಡಿಮೆ ಓವರ್ ಆಡಿದ್ದರೆ ಮರುದಿನ (ಮೀಸಲು ದಿನ) ಪಂದ್ಯ ನಡೆಯಲಿದೆ.
ಇನ್ನು ಮರುದಿನ ಕೂಡ ಮಳೆಯ ಕಾರಣ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಒಂದು ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇಲ್ಲಿ ಲೀಗ್ ಹಂತದಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡ ಫೈನಲ್ಗೆ ಪ್ರವೇಶಿಸಲಿದೆ. ಇದೀಗ ಭಾರತ-ಆಸ್ಟ್ರೇಲಿಯಾ ನಡುವಣ ಲೀಗ್ ಹಂತದ ಪಂದ್ಯಗಳ ಲೆಕ್ಕಾಚಾರ ತೆಗೆದುಕೊಂಡರೆ, ಆಸೀಸ್ ತಂಡವು ಒಂದೇ ಒಂದು ಪಂದ್ಯ ಸೋತಿಲ್ಲ. ಆದರೆ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿತ್ತು. ಹೀಗಾಗಿ ಮಳೆಯಿಂದ ಪಂದ್ಯ ರದ್ದಾದರೆ ಆಸ್ಟ್ರೇಲಿಯಾ ತಂಡವು ಫೈನಲ್ಗೆ ಪ್ರವೇಶಿಸಲಿದೆ.
Published On - 5:45 pm, Thu, 23 February 23