KL Rahul: ಕನ್ನಡಿಗ ಕೆಎಲ್ ರಾಹುಲ್ಗೆ ಅನ್ಯಾಯ… ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು
TV9 Web | Updated By: ಝಾಹಿರ್ ಯೂಸುಫ್
Updated on:
May 01, 2024 | 8:08 AM
T20 World Cup 2024: ಈ ಬಾರಿಯ ಐಪಿಎಲ್ನಲ್ಲೂ (IPL 2024) ಭರ್ಜರಿ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿಲ್ಲ. ಅಚ್ಚರಿ ಎಂದರೆ ರಾಹುಲ್ ಅವರಿಗಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದರ ಬೆನ್ನಲ್ಲೇ ಕನ್ನಡಿಗನನ್ನು ಕಡೆಗಣಿಸಲಾಗಿದೆ ಎಂಬ ಕೂಗುಗಳೆದ್ದಿವೆ.
1 / 11
T20 World Cup 2024: ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ಗೆ (KL Rahul) ಸ್ಥಾನ ನೀಡಲಾಗಿಲ್ಲ ಎಂಬುದೇ ಅಚ್ಚರಿ. ಅವರ ಬದಲಿಗೆ ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ.
2 / 11
ಮೇಲ್ನೋಟಕ್ಕೆ ರಿಷಭ್ ಪಂತ್ ಆಗಮನದಿಂದಾಗಿ ಕೆಎಲ್ ರಾಹುಲ್ ಅವಕಾಶ ವಂಚಿತರಾಗಿದ್ದಾರೆ ಎಂದೆನಿಸಿದರೂ, ಇಲ್ಲಿ ಕನ್ನಡಿಗನನ್ನು ಆಯ್ಕೆಗೆ ಪರಿಗಣಿಸಿಯೇ ಇಲ್ಲ ಎಂಬುದೇ ಸತ್ಯ. ಏಕೆಂದರೆ ಕಳೆದ ಒಂದು ವರ್ಷದಿಂದ ರಾಹುಲ್ ಅವರನ್ನು ಟಿ20 ತಂಡದಿಂದ ಹೊರಗಿಡಲಾಗಿದೆ.
3 / 11
ಅಂದರೆ ಕೆಎಲ್ ರಾಹುಲ್ ಕೊನೆಯ ಬಾರಿ ಭಾರತದ ಪರ ಟಿ20 ಪಂದ್ಯವಾಡಿರುವುದು 2022ರ ಟಿ20 ವಿಶ್ವಕಪ್ನಲ್ಲಿ ಎಂದರೆ ನಂಬಲೇಬೇಕು. ಇದರ ನಡುವೆ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಅವರು ಅದ್ಭುತ ಪ್ರದರ್ಶನವನ್ನೇ ನೀಡಿದ್ದರು.
4 / 11
ಏಕದಿನ ವಿಶ್ವಕಪ್ 2023 ರಲ್ಲಿ 10 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ರಾಹುಲ್ 1 ಭರ್ಜರಿ ಶತಕ ಹಾಗೂ 2 ಅರ್ಧಶತಕಗಳೊಂದಿಗೆ 452 ರನ್ ಕಲೆಹಾಕಿದ್ದರು. ಈ ಮೂಲಕ ಭಾರತ ತಂಡವು ಫೈನಲ್ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಆ ಬಳಿಕ ನಡೆದ ಟಿ20 ಸರಣಿಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ.
5 / 11
ಅಲ್ಲದೆ ಈ ಬಾರಿಯ ಐಪಿಎಲ್ನಲ್ಲೂ 10 ಪಂದ್ಯಗಳಿಂದ 406 ರನ್ ಕಲೆಹಾಕಿದರೂ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಬದಲಾಗಿ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಇಬ್ಬರಿಗಿಂತ ರಾಹುಲ್ ಉತ್ತಮ ಸ್ಟ್ರೈಕ್ ರೇಟ್ನೊಂದಿಗೆ, ಹೆಚ್ಚಿನ ಅವರೇಜ್ ಸ್ಕೋರ್ ಹೊಂದಿದ್ದಾರೆ.
6 / 11
ಟೀಮ್ ಇಂಡಿಯಾ ಪರ 22 ಟಿ20 ಇನಿಂಗ್ಸ್ ಆಡಿರುವ ಸಂಜು ಸ್ಯಾಮ್ಸನ್ 133.1 ಸ್ಟ್ರೈಕ್ ರೇಟ್ನಲ್ಲಿ ಈವರೆಗೆ ಕಲೆಹಾಕಿರುವುದು ಕೇವಲ 374 ರನ್ಗಳು ಮಾತ್ರ. ಅಂದರೆ ಪ್ರತಿ ಪಂದ್ಯಗಳಲ್ಲಿ ಅವರು ಕೇವಲ 18.7 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಇನ್ನು ಐಪಿಎಲ್ನಲ್ಲೂ 139.05 ಸ್ಟ್ರೈಕ್ ರೇಟ್ನಲ್ಲಿ 30.96 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
7 / 11
ಮತ್ತೊಂದೆಡೆ ರಿಷಭ್ ಪಂತ್ ಕೂಡ ಟೀಮ್ ಇಂಡಿಯಾ ಪರ 56 ಟಿ20 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 126.54 ಸ್ಟ್ರೈಕ್ ರೇಟ್ನಲ್ಲಿ ಕೇವಲ 987 ರನ್ ಮಾತ್ರ ಗಳಿಸಿದ್ದಾರೆ. ಅಂದರೆ ಪ್ರತಿ ಪಂದ್ಯಗಳಲ್ಲಿ ಅವರ ರನ್ ಸರಾಸರಿ ಕೇವಲ 22.43 ಮಾತ್ರ. ಇನ್ನು ಐಪಿಎಲ್ನಲ್ಲಿ 149.19 ಸ್ಟ್ರೈಕ್ ರೇಟ್ನಲ್ಲಿ ಬೀಸಿರುವ ಪಂತ್ 35.56 ರ ಸರಾಸರಿಯಲ್ಲಿ 3236 ರನ್ ಕಲೆಹಾಕಿದ್ದಾರೆ.
8 / 11
ಇದೇ ವೇಳೆ ಟೀಮ್ ಇಂಡಿಯಾ ಪರ 68 ಟಿ20 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 139.13 ಸ್ಟ್ರೈಕ್ ರೇಟ್ನಲ್ಲಿ 37.75 ಸರಾಸರಿಯಂತೆ 2265 ರನ್ ಕಲೆಹಾಕಿದ್ದಾರೆ. ಇನ್ನು ಐಪಿಎಲ್ನಲ್ಲಿ 135.14 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ರಾಹುಲ್ 46.15 ಸರಾಸರಿಯಂತೆ ರನ್ ಕಲೆಹಾಕಿದ್ದಾರೆ.
9 / 11
ಅಂದರೆ ಭಾರತದ ಪರ ಸಂಜು ಸ್ಯಾಮ್ಸನ್ (133.1) ಮತ್ತು ರಿಷಭ್ ಪಂತ್ (126.54) ಅವರಿಗಿಂತ ಕೆಎಲ್ ರಾಹುಲ್ ಅವರ ಸ್ಟ್ರೈಕ್ ರೇಟ್ ಉತ್ತಮವಾಗಿದೆ. ಇಲ್ಲಿ ಸ್ಯಾಮ್ಸನ್ 18ರ ಸರಾಸರಿಯಲ್ಲಿ ರನ್ ಕಲೆಹಾಕಿದರೆ, ಪಂತ್ 22ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಅವರು 37 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಅಂದರೆ ಇವರಿಬ್ಬರಿಗಿಂತ ರಾಹುಲ್ ಅವರ ರನ್ ಗಳಿಕೆಯು ಉತ್ತಮವಾಗಿರುವುದು ಸ್ಪಷ್ಟ.
10 / 11
ಇನ್ನು ಈ ಬಾರಿಯ ಐಪಿಎಲ್ನ ಪ್ರದರ್ಶನವನ್ನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸಿದ್ದರೆ ಇವರಿಬ್ಬರಿಗಿಂತ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. 11 ಪಂದ್ಯಗಳಿಂದ ರಿಷಭ್ ಪಂತ್ 398 ರನ್ ಕಲೆಹಾಕಿದರೆ, 9 ಪಂದ್ಯಗಳಿಂದ ಸಂಜು ಸ್ಯಾಮ್ಸನ್ 385 ರನ್ ಬಾರಿಸಿದ್ದಾರೆ. ಆದರೆ ಕೆಎಲ್ ರಾಹುಲ್ 10 ಪಂದ್ಯಗಳಿಂದ ಒಟ್ಟು 406 ರನ್ ಪೇರಿಸಿದ್ದಾರೆ.
11 / 11
ಇದಾಗ್ಯೂ ರಾಹುಲ್ ಅವರನ್ನು 2ನೇ ವಿಕೆಟ್ ಕೀಪರ್ ಬ್ಯಾಟರ್ ಅಥವಾ ಮೀಸಲು ಆಟಗಾರನಾಗಿ ಆಯ್ಕೆ ಮಾಡಿಲ್ಲ ಎಂಬುದೇ ಅಚ್ಚರಿ. ಒಟ್ಟಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಕೆಎಲ್ ರಾಹುಲ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.