IND vs USA: ಟೀಮ್ ಇಂಡಿಯಾ vs ಮಿನಿ ಇಂಡಿಯಾ
T20 World Cup 2024: ಟಿ20 ವಿಶ್ವಕಪ್ ಆಡುತ್ತಿರುವ ಯುಎಸ್ಎ ತಂಡದಲ್ಲಿ 8 ಭಾರತೀಯರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇಬ್ಬರು ಪಾಕಿಸ್ತಾನಿಯರು ತಂಡದಲ್ಲಿದ್ದಾರೆ. ಇನ್ನುಳಿದಂತೆ ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ನೆದರ್ಲೆಂಡ್ಸ್ನ ತಲಾ ಒಬ್ಬೊಬ್ಬ ಆಟಗಾರರು ಯುಎಸ್ಎ ಬಳಗದಲ್ಲಿದ್ದಾರೆ. ಹೀಗಾಗಿಯೇ ಇಂದಿನ ಪಂದ್ಯ ಟೀಮ್ ಇಂಡಿಯಾ ವರ್ಸಸ್ ಮಿನಿ ಇಂಡಿಯಾ ಎಂದು ಬಣ್ಣಿಸಲಾಗುತ್ತಿದೆ.
Updated on: Jun 12, 2024 | 1:10 PM

T20 World Cup 2024: ಭಾರತ ಮತ್ತು ಯುಎಸ್ಎ (IND vs USA) ನಡುವಣ ಚೊಚ್ಚಲ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಬುಧವಾರ (ಜೂ.12) ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ವರ್ಸಸ್ ಮಿನಿ ಇಂಡಿಯಾ ಕದನವಾಗಿ ಮಾರ್ಪಟ್ಟಿದೆ.

ಏಕೆಂದರೆ ಯುಎಸ್ಎ ತಂಡದಲ್ಲಿ 8 ಭಾರತೀಯರಿದ್ದಾರೆ. ಅಂದರೆ 15 ಸದಸ್ಯರ ಬಳಗದಲ್ಲಿ ಬಹುಪಾಲು ಭಾರತೀಯ ಮೂಲದ ಆಟಗಾರರೇ ಆವರಿಸಿಕೊಂಡಿದ್ದಾರೆ. ಹೀಗಾಗಿ ಇದು ಭಾರತ ಮತ್ತು ಮಿನಿ ಭಾರತ ನಡುವಣ ಸಮರ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಶೇಷ ಎಂದರೆ ಇವರಲ್ಲಿ ಕೆಲವರು ಈ ಹಿಂದೆ ಟೀಮ್ ಇಂಡಿಯಾ ಪರ ಕೂಡ ಕಣಕ್ಕಿಳಿದಿದ್ದರು. ಅಂದರೆ ಅಂಡರ್-19 ವಿಶ್ವಕಪ್ನಲ್ಲಿ ಹರ್ಮೀತ್ ಸಿಂಗ್ ಮತ್ತು ಸೌರಭ್ ನೇತ್ರವಾಲ್ಕರ್ ಭಾರತದ ಪರ ಆಡಿದ್ದರು. ಇದೀಗ ಈ ಆಟಗಾರರೇ ಭಾರತದ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿರುವುದು ವಿಶೇಷ.

ಅಂದಹಾಗೆ ಯುಎಸ್ಎ ತಂಡವನ್ನು ಮುನ್ನಡೆಸುತ್ತಿರುವುದು ಕೂಡ ಭಾರತೀಯ ಮೂಲದ ಮೊನಾಂಕ್ ಪಟೇಲ್ ಎಂಬುದು ಮತ್ತೊಂದು ವಿಶೇಷ. ಮೊನಾಂಕ್ ಜೊತೆ ಭಾರತೀಯ ಮೂಲದ ಸೌರಭ್ ನೇತ್ರವಾಲ್ಕರ್, ಹರ್ಮೀತ್ ಸಿಂಗ್, ನಿತೀಶ್ ಕುಮಾರ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ಜಸ್ದೀಪ್ ಸಿಂಗ್, ನೊಷ್ತುಶ್ ಕೆಂಜಿಗೆ ಯುಎಸ್ಎ ತಂಡದಲ್ಲಿದ್ದಾರೆ.

ಇನ್ನು ಪಾಕಿಸ್ತಾನ್ ಮೂಲದ ಅಲಿ ಖಾನ್ ಕೂಡ ಯುಎಸ್ಎ ತಂಡದಲ್ಲಿದ್ದು, ಇನ್ನುಳಿದಂತೆ ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ನ ತಲಾ ಒಬ್ಬೊಬ್ಬ ಆಟಗಾರರು ಯುಎಸ್ಎ ಬಳಗದಲ್ಲಿದ್ದಾರೆ.

ಅಂದರೆ 15 ಸದಸ್ಯರ ಯುಎಸ್ಎ ಬಳಗದಲ್ಲಿ ಅಮೆರಿಕದ ಕೇವಲ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನುಳಿದವರಲ್ಲಿ 8 ಮಂದಿ ಭಾರತೀಯರು ಇದ್ದಾರೆ. ಹೀಗಾಗಿಯೇ ಇಂದಿನ ಪಂದ್ಯವನ್ನು ಟೀಮ್ ಇಂಡಿಯಾ vs ಮಿನಿ ಇಂಡಿಯಾ ಎಂದು ಬಣ್ಣಿಸಲಾಗುತ್ತಿದೆ.

ಯುಎಸ್ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್, ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೊಷ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಸ್ಚಾಲ್ಕ್‌ವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್.
