- Kannada News Photo gallery Cricket photos T20 World Cup 2024: Jordan becomes first England bowler to bag hat-trick
Chris Jordan: ಜೋರ್ಡನ್ ಜಾದೂ: 3 ಎಸೆತಗಳಲ್ಲಿ ವಿಶ್ವ ದಾಖಲೆ
T20 World Cup 2024: ಟಿ20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡವು 115 ರನ್ಗಳಿಸಲಷ್ಟೇ ಶಕ್ತರಾದರು. ಈ ಗುರಿಯನ್ನು 9.4 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಆಂಗ್ಲ ಪಡೆ 10 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಸೆಮಿಫೈನಲ್ಗೇರಿದೆ.
Updated on: Jun 24, 2024 | 8:32 AM

T20 World Cup 2024: ಟಿ20 ವಿಶ್ವಕಪ್ನ 49ನೇ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡ ಭರ್ಜರಿ ಜಯ ಸಾಧಿಸಿದೆ. ಯುಎಸ್ಎ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡವನ್ನು 18.5 ಓವರ್ಗಳಲ್ಲಿ 115 ರನ್ಗಳಿಗೆ ಆಲೌಟ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್ಗಳು ಯಶಸ್ವಿಯಾದರು. ಹೀಗೆ ಯುಎಸ್ಎ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ಜೋರ್ಡನ್.

ಈ ಪಂದ್ಯದಲ್ಲಿ 19ನೇ ಓವರ್ ಎಸೆದ ಕ್ರಿಸ್ ಜೋರ್ಡನ್ ಮೊದಲ ಎಸೆತದಲ್ಲೇ ಕೋರಿ ಅ್ಯಂಡರ್ಸನ್ ವಿಕೆಟ್ ಕಬಳಿಸಿದರು. ಇನ್ನು ಮೂರನೇ ಎಸೆತದಲ್ಲಿ ಅಲಿಖಾನ್ ವಿಕೆಟ್ ಪಡೆದರು. ಹಾಗೆಯೇ ನಾಲ್ಕನೇ ಎಸೆತದಲ್ಲಿ ನುಷ್ತುಶ್ ಕೆಂಜಿಗೆ ಹಾಗೂ ಐದನೇ ಎಸೆತದಲ್ಲಿ ಸೌರಭ್ ನೇತ್ರಾವಲ್ಕರ್ ಅವರನ್ನು ಔಟ್ ಮಾಡಿದರು.

ಈ ಮೂಲಕ ಕ್ರಿಸ್ ಜೋರ್ಡನ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ ಇಂಗ್ಲೆಂಡ್ನ ಮೊದಲ ಬೌಲರ್ ಎನಿಸಿಕೊಂಡರು. ಇದರ ಜೊತೆಗೆ ಟಿ20 ವಿಶ್ವಕಪ್ನಲ್ಲಿ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಇದಕ್ಕೂ ಮುನ್ನ 2021ರ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಬೌಲರ್ ಕರ್ಟಿಸ್ ಕ್ಯಾಂಫರ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 4 ವಿಕೆಟ್ ಕಬಳಿಸಿದ್ದರು. ಇದೀಗ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್ ಕೂಡ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
