2023 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿಯೂ ಟೀಂ ಇಂಡಿಯಾ ಕಳೆದ ಬಾರಿಯಂತೆ ಬರಿಗೈಯಲ್ಲಿ ವಾಪಸ್ಸಾಗುತ್ತಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಟೀಂ ಇಂಡಿಯಾ ಪಂದ್ಯಾವಳಿಯಿಂದ ಹೊರಬಿದ್ದಿದೆ. ಆದರೆ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ಮಾತ್ರ ಇನ್ನೂ ಐಸಿಸಿ ಪ್ರಶಸ್ತಿ ಗೆಲ್ಲುವ ಅವಕಾಶ ಹಾಗೆ ಉಳಿದಿದೆ.
ಫೆಬ್ರವರಿ 26ರ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ಐಸಿಸಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ್ತಿಯರ ಆಯ್ಕೆಗಾಗಿ 9 ಆಟಗಾರ್ತಿಯರ ಕಿರು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಟೀಂ ಇಂಡಿಯಾ ಆಟಗಾರ್ತಿ ರಿಚಾ ಘೋಷ್ ಕೂಡ ಸ್ಥಾನ ಪಡೆದಿದ್ದಾರೆ.
ಟೂರ್ನಿಯಲ್ಲಿ 19ರ ಹರೆಯದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ತಮಗೆ ನೀಡಿದ್ದ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಟೂರ್ನಿಯಲ್ಲಿ, ರಿಚಾ ಎರಡು ಬಾರಿ 40 ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಇದರಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 47 ರನ್ ಗಳಿಸಿದು ವಿಶೇಷವಾಗಿತ್ತು.
ಒಟ್ಟಾರೆ ರಿಚಾ ಇಡೀ ಟೂರ್ನಿಯಲ್ಲಿ 68ರ ಸರಾಸರಿಯಲ್ಲಿ 136 ರನ್ ಗಳಿಸಿದರು. ಹಾಗೆಯೇ ಪಂದ್ಯಾವಳಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಅಜೇಯರಾಗಿ ಉಳಿದರು. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 130 ಆಗಿತ್ತು. ಹಾಗೆಯೇ ವಿಕೆಟ್ ಕೀಪಿಂಗ್ನಲ್ಲೂ ಮಿಂಚಿದ ರಿಚಾ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಇಂಗ್ಲೆಂಡ್ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್ ಅವರನ್ನು ಪೆವಿಲಿಯನ್ಗಟ್ಟಿದ್ದರು.
ರಿಚಾ ಹೊರತುಪಡಿಸಿ, ಹಾಲಿ ಚಾಂಪಿಯನ್ ತಂಡದಿಂದ ಮೂವರು, ಇಂಗ್ಲೆಂಡ್‌ನ ಇಬ್ಬರು ಮತ್ತು ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರ್ತಿಯರು ಪ್ರಶಸ್ತಿ ರೇಸ್ನಲ್ಲಿದ್ದಾರೆ. ಇನ್ನುಳಿದಂತೆ ಭಾರತ ಮತ್ತು ವೆಸ್ಟ್ ಇಂಡೀಸ್‌ನ ತಲಾ ಒಬ್ಬ ಆಟಗಾರ್ತಿ ಇದರಲ್ಲಿ ಸ್ಥಾನ ಪಡೆದಿದ್ದಾರೆ ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ( 139 ರನ್), ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲಿಸ್ಸಾ ಹೀಲಿ (171 ರನ್) ಮತ್ತು ಆಲ್‌ರೌಂಡರ್ ಆಶ್ ಗಾರ್ಡ್ನರ್ (81 ರನ್ ಮತ್ತು ಒಂಬತ್ತು ವಿಕೆಟ್) ಪಟ್ಟಿಯಲ್ಲಿದ್ದಾರೆ.
ಅದೇ ಸಮಯದಲ್ಲಿ, ಇಂಗ್ಲೆಂಡ್‌ನ ನೇಟ್ ಸೀವರ್-ಬ್ರಂಟ್ (216 ರನ್) ಮತ್ತು ಸೋಫಿ ಎಕ್ಲೆಸ್ಟನ್ (ಓವರ್‌ಗೆ 4.15 ರನ್ ಮತ್ತು 11 ವಿಕೆಟ್), ದಕ್ಷಿಣ ಆಫ್ರಿಕಾದ ಲಾರಾ ವೂಲ್ವಾರ್ಟ್ ಮತ್ತು ತಜ್ಮಿನ್ ಬ್ರಿಟ್ಸ್ ರೇಸ್ನಲ್ಲಿದ್ದಾರೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ಕೂಡ ಸೇರಿದ್ದು, ಮ್ಯಾಥ್ಯೂಸ್ 130 ರನ್ ಮತ್ತು ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು.
Published On - 10:22 am, Sun, 26 February 23