- Kannada News Photo gallery Cricket photos Team India never won single test match in Chennai in the month of september
IND vs BAN: ಚೆನ್ನೈ ಟೆಸ್ಟ್ಗೆ ಸಿದ್ಧವಾಗಿರುವ ಟೀಂ ಇಂಡಿಯಾಗೆ ಸೆಪ್ಟೆಂಬರ್ ಆತಂಕ
IND vs BAN: ಚೆನ್ನೈನಲ್ಲಿ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿರುವ ಭಾರತ ತಂಡಕ್ಕೆ ಸೆಪ್ಟೆಂಬರ್ನ ಕರಾಳ ಇತಿಹಾಸ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಷ್ಟಕ್ಕೂ ಸೆಪ್ಟೆಂಬರ್ ತಿಂಗಳಿಗೂ ಚೆನ್ನೈನಲ್ಲಿ ನಡೆಯಲ್ಲಿರುವ ಟೆಸ್ಟ್ ಪಂದ್ಯಕ್ಕೂ ಹಾಗೂ ಟೀಂ ಇಂಡಿಯಾಕ್ಕೂ ಇರುವ ಸಂಬಂಧವೇನು ಎಂಬುದನ್ನು ನೋಡುವುದಾದರೆ..
Updated on: Sep 17, 2024 | 10:30 PM

ಸೆಪ್ಟೆಂಬರ್ 19 ರಿಂದ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಬಿಳಿ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿಯಲಿದೆ. ಪೂರ್ಣ 6 ತಿಂಗಳ ನಂತರ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಆಡಲಿದ್ದು, ಇದರೊಂದಿಗೆ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ತಮ್ಮ ಅಭಿಯಾನವನ್ನು ಮುಂದುವರಿಸಲಿದೆ.

ಬಹಳ ದಿನಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುತ್ತಿರುವ ರೋಹಿತ್ ಪಡೆಗೆ ಎದುರಾಳಿಯಾಗಿ ಬಾಂಗ್ಲಾದೇಶ ತಂಡವಿದೆ. ಈ ಮೊದಲು ಬಾಂಗ್ಲಾದೇಶ ತಂಡ, ಟೀಂ ಇಂಡಿಯಾಕ್ಕೆ ಸುಲಭ ತುತ್ತಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚೆಗಷ್ಟೇ ಈ ತಂಡ ಪಾಕಿಸ್ತಾನವನ್ನು ಅವರ ಮಣ್ಣಿನಲ್ಲೇ ಸೋಲಿಸಿದೆ. ಹೀಗಾಗಿ ಈ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ.

ಇದೆಲ್ಲದರ ನಡುವೆ ಚೆನ್ನೈನಲ್ಲಿ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿರುವ ಭಾರತ ತಂಡಕ್ಕೆ ಸೆಪ್ಟೆಂಬರ್ನ ಕರಾಳ ಇತಿಹಾಸ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಷ್ಟಕ್ಕೂ ಸೆಪ್ಟೆಂಬರ್ ತಿಂಗಳಿಗೂ ಚೆನ್ನೈನಲ್ಲಿ ನಡೆಯಲ್ಲಿರುವ ಟೆಸ್ಟ್ ಪಂದ್ಯಕ್ಕೂ ಹಾಗೂ ಟೀಂ ಇಂಡಿಯಾಕ್ಕೂ ಇರುವ ಸಂಬಂಧವೇನು ಎಂಬುದನ್ನು ನೋಡುವುದಾದರೆ..

ವಾಸ್ತವವಾಗಿ 1934 ರಲ್ಲಿ ಚೆನ್ನೈನಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಅಂದಿನಿಂದ ಇಲ್ಲಿಯವರೆಗೆ ಚೆನ್ನೈನಲ್ಲಿ ಒಟ್ಟು 34 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ ಭಾರತ ತಂಡ 15 ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿದ್ದು, 11ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಉಳಿದಂತೆ 7 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.

ಇನ್ನು ವಿವಿದ ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲೇ ಈ ಮೈದಾನದಲ್ಲಿ ಇದುವರೆಗೆ 3 ಟೆಸ್ಟ್ ಪಂದ್ಯಗಳು ಆಡಲಾಗಿದೆ. ಆದರೆ ಈ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಒಂದು ಬಾರಿಯೂ ಗೆದ್ದಿಲ್ಲ. ಈ ಪೈಕಿ 2 ಪಂದ್ಯ ಡ್ರಾ ಆಗಿದ್ದರೆ, 1 ಪಂದ್ಯ ಟೈ ಆಗಿದೆ.

ಸೆಪ್ಟೆಂಬರ್ 1979 ರಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ನಂತರ ಸೆಪ್ಟೆಂಬರ್ 1982ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯವೂ ಡ್ರಾ ಆಗಿತ್ತು. 1986ರಲ್ಲಿ ನಡೆದಿದ್ದ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತ್ತು.

ಆ ಬಳಿಕ ಅಂದರೆ 1986 ರಿಂದ ಇಲ್ಲಿಯವರೆಗೆ, ಸೆಪ್ಟೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ಟೀಂ ಇಂಡಿಯಾ ಯಾವುದೇ ಟೆಸ್ಟ್ ಆಡಿಲ್ಲ. ಅಂದರೆ ಸೆಪ್ಟಂಬರ್‌ನಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾ ಯಾವುದೇ ಗೆಲುವು ಪಡೆದಿಲ್ಲವಾದರೂ ಸೋಲನ್ನು ಸಹ ಕಂಡಿಲ್ಲ. ಇದೀಗ ಈ ಇತಿಹಾಸವನ್ನು ಬದಲಿಸಲು ನಾಯಕ ರೋಹಿತ್ ಶರ್ಮಾಗೆ ಅವಕಾಶ ಸಿಕ್ಕಿದೆ.




