ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
India Womens Beat England Womens: ಮೊದಲು ಇನಿಂಗ್ಸ್ನಲ್ಲಿ ಶುಭಾ ಸತೀಶ್ (69), ಜೆಮಿಮಾ ರೊಡ್ರಿಗಾಸ್ (68), ಯಾಸ್ತಿಕಾ ಭಾಟಿಯಾ (66) ಹಾಗೂ ದೀಪ್ತಿ ಶರ್ಮಾ (67) ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 428 ರನ್ ಕಲೆಹಾಕಿತು.
Updated on: Dec 16, 2023 | 11:57 AM

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವುಮೆನ್ಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ವುಮೆನ್ಸ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಇನಿಂಗ್ಸ್ನಲ್ಲಿ ಶುಭಾ ಸತೀಶ್ (69), ಜೆಮಿಮಾ ರೊಡ್ರಿಗಾಸ್ (68), ಯಾಸ್ತಿಕಾ ಭಾಟಿಯಾ (66) ಹಾಗೂ ದೀಪ್ತಿ ಶರ್ಮಾ (67) ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 428 ರನ್ ಕಲೆಹಾಕಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ದೀಪ್ತಿ ಶರ್ಮಾ ಅವರ ಸ್ಪಿನ್ ಮೋಡಿಗೆ ತತ್ತರಿಸಿತು. 5.3 ಓವರ್ ಬೌಲ್ ಮಾಡಿದ್ದ ದೀಪ್ತಿ ಕೇವಲ 7 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 136 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

ಆ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅದರಂತೆ 479 ರನ್ಗಳ ಗುರಿಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಕೇವಲ 131 ರನ್ಗಳಿಗೆ ಆಲೌಟ್ ಆಗಿದೆ.

ಈ ಮೂಲಕ ಟೀಮ್ ಇಂಡಿಯಾ 347 ರನ್ಗಳ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ಮಹಿಳಾ ತಂಡ ಎಂಬ ವಿಶ್ವ ದಾಖಲೆ ಭಾರತ ತಂಡದ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಹೆಸರಿನಲ್ಲಿತ್ತು. 1998 ರಲ್ಲಿ ಪಾಕಿಸ್ತಾನ್ ವಿರುದ್ಧ ಶ್ರೀಲಂಕಾ 309 ರನ್ಗಳ ಜಯ ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 347 ರನ್ಗಳ ಅಂತರದಿಂದ ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.

TV9 Kannada
Read More



