
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾದ ನಾಲ್ವರು ಆಟಗಾರರು ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ಧಿಯನ್ನು ಪುಷ್ಠಕೀರಿಸುವಂತೆ ಸರಣಿ ನಡುವೆಯೇ ರವಿಚಂದ್ರನ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿದ್ದರು.

ನ್ಯೂಝಿಲೆಂಡ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಟೀಮ್ ಇಂಡಿಯಾದಲ್ಲಿರುವ ಹಿರಿಯ ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಫಲರಾದರೆ ಭಾರತ ತಂಡದಿಂದ ನಾಲ್ವರಿಗೆ ಗೇಟ್ ಪಾಸ್ ನೀಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು.

ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯು ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರಿಗೆ ನಿರ್ಣಾಯಕ ಎಂದು ಪರಿಗಣಿಸಲಾಗಿತ್ತು. ಇದೀಗ ಇವರಲ್ಲಿ ಮೂವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.

ಅಂದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯೊಂದಿಗೆ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಟೆಸ್ಟ್ ಕೆರಿಯರ್ ಕೊನೆಗೊಂಡಿದೆ. ಇದರ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿರುವ ನಾಲ್ಕನೇ ಆಟಗಾರ ಯಾರೆಂಬ ಚರ್ಚೆಗಳು ಕೂಡ ಶುರುವಾಗಿದೆ.

ಈ ಚರ್ಚೆಯ ನಡುವೆ ರವೀಂದ್ರ ಜಡೇಜಾ ಹೆಸರು ಕೇಳಿ ಬರಲಾರಂಭಿಸಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಸರಣಿಯು ಜಡೇಜಾ ಪಾಲಿಗೆ ನಿರ್ಣಾಯಕವಾಗಬಹುದು. ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಗೆ ಜಡ್ಡು ಆಯ್ಕೆಯಾಗದಿದ್ದರೆ, ಅವರು ಸಹ ನಿವೃತ್ತಿ ಘೋಷಿಸಬಹುದು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಮೂವರು ಹಿರಿಯ ಆಟಗಾರರ ವಿದಾಯದೊಂದಿಗೆ 36 ವರ್ಷದ ರವೀಂದ್ರ ಜಡೇಜಾ ಅವರ ಮೇಲೂ ನಿವೃತ್ತಿಯ ತೂಗುಗತ್ತಿ ಇರುವುದು ಖಚಿತವಾಗಿದೆ. ಹೀಗಾಗಿ ಜಡ್ಡು ಕಡೆಯಿಂದಲೂ ವಿದಾಯದ ಪೋಸ್ಟ್ ಅನ್ನು ನಿರೀಕ್ಷಿಸಬಹುದು. ಆದರೆ ಅದು ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನವಾ? ಅಥವಾ ಬಳಿಕವಾ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.