Updated on:Dec 29, 2021 | 10:36 PM
ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ (Team India) 3 ವಿಕೆಟ್ ನಷ್ಟಕ್ಕೆ 272 ರನ್ಗಳಿಸಿತ್ತು. 2ನೇ ದಿನದಾಟವು ಮಳೆಗೆ ಅಹುತಿಯಾದರೆ, ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 55 ಸೇರಿಸುವಷ್ಟರಲ್ಲಿ ಸರ್ಪಪತನ ಕಂಡಿತು. ಅದರಂತೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 327 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಶಮಿ (Mohammed Shami) ಅವರ ಮಾರಕ ದಾಳಿಗೆ ತರಗೆಲೆಯಂತೆ ಉದುರಿದವು.
ಟೀಮ್ ಇಂಡಿಯಾ ಪರ ಕರಾರುವಾಕ್ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 44 ರನ್ಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಇದರೊಂದಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ 11ನೇ ಬೌಲರ್ ಎಂಬ ದಾಖಲೆಯನ್ನು ಶಮಿ ಬರೆದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 200 ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಇದೀಗ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದರು.
ಅಶ್ವಿನ್ 10248 ಎಸೆತಗಳ ಮೂಲಕ 200 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ ಇನ್ನೂರು ವಿಕೆಟ್ ಪಡೆದು ಹೊಸ ದಾಖಲೆ ಬರೆದರು. ಇದಾಗ್ಯೂ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 200 ವಿಕೆಟ್ ಪಡೆದ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ಈ ದಾಖಲೆ ದಿ ಲೆಜೆಂಡ್ ಕಪಿಲ್ ದೇವ್ ಹೆಸರಿನಲ್ಲಿದೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಅತೀ ಕಡಿಮೆ ಟೆಸ್ಟ್ನಲ್ಲಿ 200 ವಿಕೆಟ್ ಪಡೆದ ಟಾಪ್ 5 ವೇಗದ ಬೌಲರುಗಳು ಯಾರೆಂದು ನೋಡೋಣ...
1- ಕಪಿಲ್ ದೇವ್: ಟೀಮ್ ಇಂಡಿಯಾ ದಂತಕಥೆ ಕಪಿಲ್ ದೇವ್ ಕೇವಲ 50 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ.
2- ಜಾವಗಲ್ ಶ್ರೀನಾಥ್: ಮೈಸೂರು ಎಕ್ಸ್ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ 54 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಉರುಳಿಸಿದ್ದರು.
3- ಮೊಹಮ್ಮದ್ ಶಮಿ: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ 200 ವಿಕೆಟ್ ಉರುಳಿಸಲು ತೆಗೆದುಕೊಂಡಿದ್ದು 55 ಪಂದ್ಯಗಳನ್ನು ಎಂಬುದು ವಿಶೇಷ.
4- ಜಹೀರ್ ಖಾನ್: ಟೀಮ್ ಇಂಡಿಯಾದ ಮಾಜಿ ಎಡಗೈ ವೇಗಿ ಜಹೀರ್ ಖಾನ್ 63 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಕಬಳಿಸಿದ್ದರು.
5- ಇಶಾಂತ್ ಶರ್ಮಾ: ಪ್ರಸ್ತುತ ಟೀಮ್ ಇಂಡಿಯಾದ ವೇಗದ ಬೌಲರುಗಳಲ್ಲಿ ಒಬ್ಬರಾಗಿರುವ ಇಶಾಂತ್ ಶರ್ಮಾ ಕೂಡ 63 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ ಪಡೆದಿದ್ದರು.
Published On - 3:34 pm, Wed, 29 December 21