Updated on:Apr 03, 2023 | 5:53 AM
ಅದೃಷ್ಟ ಯಾರಿಗೆ ಹೇಗೆ ಬರುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಪಟ್ಟ ಪರಿಶ್ರಮಕ್ಕೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತೆ ಎಂಬುದಕ್ಕೆ ತಾಜಾ ಉದಾಹರಣೆ ಹೈದರಾಬಾದ್ನ ತಿಲಕ್ ವರ್ಮಾ. ಈ ಹೆಸರು ಈ ಹಿಂದೆ ಕೂಡ ನೀವು ಕ್ರಿಕೆಟ್ ಅಂಗಳದಲ್ಲಿ ಕೇಳಿರಬಹುದು. ಏಕೆಂದರೆ ತಿಲಕ್ ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.
2020ರ ಅಂಡರ್ 19 ವಿಶ್ವಕಪ್ ರನ್ನರ್ ಅಪ್ ತಂಡದ ಭಾಗವಾಗಿದ್ದರು. ಈ ವೇಳೆ ಜೊತೆಗಿದ್ದ ಹಲವು ಆಟಗಾರರಿಗೆ ಐಪಿಎಲ್ 2020 ಮತ್ತು 2021 ರಲ್ಲಿ ಅವಕಾಶ ಸಿಕ್ಕಿತ್ತು. ಆದರೆ ತಿಲಕ್ ವರ್ಮಾ ಮಾತ್ರ ತನ್ನ ಟೈಮ್ಗಾಗಿ ಕಾಯುತ್ತಿದ್ದರು.
ಅತ್ತ 2020 ಮತ್ತು 2021ರ ಐಪಿಎಲ್ನಲ್ಲಿ ಅವಕಾಶ ಸಿಗದಿದ್ದಾಗ ಇತ್ತ ಕುಟುಂಬಸ್ಥರು ಕೂಡ ದುಖಃಕ್ಕೀಡಾಗಿದ್ದರು. ಏಕೆಂದರೆ ತಿಲಕ್ ವರ್ಮಾ ಅವರ ಕ್ರಿಕೆಟ್ ಕನಸಿಗಾಗಿ ಕುಟುಂಬಸ್ಥರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿದ್ದರು. ಅದರಲ್ಲೂ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅವರ ತಂದೆಯ ಕಷ್ಟಗಳನ್ನು ನೋಡಿ ಆ ಬಳಿಕ ಖುದ್ದು ಕೋಚ್ ಕೂಡ ಯುವ ಕ್ರಿಕೆಟಿಗನ ಸಹಾಯಕ್ಕೆ ನಿಂತಿದ್ದರು.
2022 ರಲ್ಲಿ ತಿಲಕ್ ವರ್ಮಾ ಅವರ ಬಹುದಿನಗಳ ಕನಸು ಕೊನೆಗೂ ಈಡೇರಿತು. ಐಪಿಎಲ್ ಮೆಗಾ ಹರಾಜಿನಲ್ಲಿ ತಿಲಕ್ ವರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಬರೋಬ್ಬರಿ 1.7 ಕೋಟಿ ನೀಡಿ ಖರೀದಿಸಿತ್ತು. ಇತ್ತ ಮಗನಿಗೆ ಅದೃಷ್ಟ ಖುಲಾಯಿಸುತ್ತಿದ್ದಂತೆ ಅವರ ತಂದೆ ಮಾಧ್ಯಮದ ಜೊತೆ ಹೇಳಿದ್ದು ಒಂದೇ ಮಾತು...
ನನ್ನ ಮಗನ ಸಾಧನೆಯಲ್ಲಿ ನನ್ನ ಬಗ್ಗೆ ನೀವು ಏನೂ ಬರೆಯದಿದ್ದರೂ ಪರವಾಗಿಲ್ಲ. ಆದರೆ ಅವನಿಗೆ ಕೋಚಿಂಗ್ ನೀಡಿದ ಸಲಾಮ್ ಅವರ ಬಗ್ಗೆ ಬರೆಯಲೇಬೇಕು. ಏಕೆಂದರೆ ನನ್ನ ಮಗ ಇಂದು ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕೋಚ್ ಸಲಾಮ್ ಮುಖ್ಯ ಕಾರಣ. ಅವನ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಆರ್ಥಿಕ ಸಹಾಯ ಮಾಡಿದ್ದಾರೆ. ಅಲ್ಲದೆ ಅವರೇ ಕ್ರಿಕೆಟ್ ಅಕಾಡೆಮಿಯ ಫೀಸ್ ಭರಿಸಿ ತರಬೇತಿ ನೀಡಿದ್ದಾರೆ. (ಕೋಚ್ ಜೊತೆ ತಿಲಕ್ ವರ್ಮಾ)
ಇದೀಗ ಅವರಿಂದಾಗಿ ನನ್ನ ಮಗ ಐಪಿಎಲ್ವರೆಗೂ ಬೆಳೆದು ನಿಂತಿದ್ದಾನೆ. ಇದಕ್ಕೆಲ್ಲಾ ಕಾರಣ ಸಲಾಮ್. ಹೀಗಾಗಿ ಮಗನ ಸಾಧನೆ ಬಗ್ಗೆ ಬರೆಯುವಾಗ ನನ್ನ ಹೆಸರು ಬರದಿದ್ದರೂ ಅಡ್ಡಿಯಿಲ್ಲ, ಆದರೆ ಸಲಾಮ್ ಭಾಯಿ ಅವರ ಬಗ್ಗೆ ಬರೆಯಲೇಬೇಕು ಎಂದು ತಿಲಕ್ ವರ್ಮಾ ತಂದೆ ನಂಬೂರಿ ನಾಗರಾಜ ತಿಳಿಸಿದ್ದರು.
ಅದರಂತೆ ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ 14 ಪಂದ್ಯಗಳನ್ನಾಡಿದ್ದ ತಿಲಕ್ ವರ್ಮಾ 2 ಅರ್ಧಶತಕದೊಂದಿಗೆ 397 ರನ್ಗಳಿಸಿ ಮಿಂಚಿದ್ದರು.
ಇದೀಗ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಇಡೀ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ವಿಫಲವಾದರೂ 20 ರ ಹರೆಯದ ತಿಲಕ್ ವರ್ಯಾ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ. ಆರ್ಸಿಬಿ ತಂಡದ ಕರಾರುವಾಕ್ ದಾಳಿಗೆ ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ.
ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ತಿಲಕ್ ವರ್ಮಾ 4 ಭರ್ಜರಿ ಸಿಕ್ಸ್ ಹಾಗೂ 9 ಫೋರ್ನೊಂದಿಗೆ ಅಜೇಯ 84 ರನ್ ಬಾರಿಸಿದ್ದಾರೆ. ಈ ಮೂಲಕ ತನ್ನ ತಾನೆಂತಹ ಬ್ಯಾಟರ್ ಎಂಬುದನ್ನು ಎಡಗೈ ದಾಂಡಿಗ ಇಡೀ ವಿಶ್ವಕ್ಕೆ ಸಾರಿದ್ದಾನೆ.
ಒಟ್ಟಿನಲ್ಲಿ ತಿಲಕ್ ವರ್ಮಾ ಅವರ ಕನಸು, ಕುಟುಂಬಸ್ಥರ ಕಣ್ಣೀರು ಹಾಗೂ ಕೋಚ್ ಸಲಾಮ್ ಭಾಯಿ ಅವರ ನಂಬಿಕೆ ಕೊನೆಗೂ ಹುಸಿಯಾಗಿಲ್ಲ ಎಂದೇ ಹೇಳಬಹುದು. ನಿರೀಕ್ಷೆಯಂತೆ ಯುವ ಪ್ರತಿಭೆ ಐಪಿಎಲ್ನಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ಇಂತಹ ಬಡಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಸಲಾಮ್ ಭಾಯಿ ಅವರಂತಹ ಮತ್ತಷ್ಟು ಕೋಚ್ ಬರಲಿ, ಇನ್ನಷ್ಟು ಬಡ ಪ್ರತಿಭೆಗಳು ಬೆಳಕಿಗೆ ಬರಲಿ ಎಂದಷ್ಟೇ ಆಶಿಸೋಣ.
Published On - 11:08 pm, Sun, 2 April 23