ಬಿಗ್ ಬ್ಯಾಷ್ ಲೀಗ್ನಿಂದ ಹೊರಬಿದ್ದ RCB ಆಟಗಾರ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ 17 ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ಹೀಗೆ ರಿಟೈನ್ ಆದ ಆಟಗಾರರಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಕೂಡ ಒಬ್ಬರು. ಇದೀಗ ಟಿಮ್ ಡೇವಿಡ್ ಗಾಯಗೊಂಡಿರುವುದು ಆರ್ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ.
Updated on:Dec 30, 2025 | 7:34 AM

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಿಂದ ಸ್ಟಾರ್ ಆಟಗಾರ ಟಿಮ್ ಡೇವಿಡ್ (Tim David) ಹೊರಬಿದ್ದಿದ್ದಾರೆ. ಪರ್ತ್ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ 12ನೇ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಬ್ಯಾಟಿಂಗ್ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು.

ಇದೀಗ ಈ ಗಾಯದ ಕಾರಣ ಅವರು ಬಿಗ್ ಬ್ಯಾಷ್ ಲೀಗ್ ಅನ್ನು ಅರ್ಧದಲ್ಲೇ ತೊರೆದಿದ್ದಾರೆ. ಗಾಯವು ಗಂಭೀರವಾಗಿರುವ ಕಾರಣ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ಗೂ ಟಿಮ್ ಡೇವಿಡ್ ಅನುಮಾನ ಎನ್ನಲಾಗಿದೆ.

ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಟಿಮ್ ಡೇವಿಡ್ ಆಯ್ಕೆಯಾಗುವುದು ಖಚಿತವಾಗಿತ್ತು. ಆದರೀಗ ಅವರು ಗಂಭೀರ ಗಾಯಕ್ಕೆ ಒಳಗಾಗಿರುವುದು ಕ್ರಿಕೆಟ್ ಆಸ್ಟ್ರೇಲಿಯಾದ ಚಿಂತೆಗೆ ಕಾರಣವಾಗಿದೆ. ಇದಾಗ್ಯೂ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಕೂಡ ಚಿಂತಿಸಲಾಗಿದೆ.

ಅಂದರೆ ಟಿ20 ವಿಶ್ವಕಪ್ಗೆ ಇನ್ನೂ ಒಂದು ತಿಂಗಳು ಇರುವ ಕಾರಣ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸದಿದ್ದರೆ ಟೀಮ್ನಿಂದ ಕೈ ಬಿಡಲು ಕ್ರಿಕೆಟ್ ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಚರ್ಚಿಸಿದೆ ಎಂದು ವರದಿಯಾಗಿದೆ.

ಒಂದು ವೇಳೆ ಟಿಮ್ ಡೇವಿಡ್ ಟಿ20 ವಿಶ್ವಕಪ್ ವೇಳೆ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಪ್ರಮುಖ ಟೂರ್ನಿಯಿಂದ ಹೊರಗುಳಿದ ಆಟಗಾರರು ಸಂಪೂರ್ಣ ಫಿಟ್ನೆಸ್ ಸಾಧಿಸುವರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಎನ್ಒಸಿ ನೀಡುವುದಿಲ್ಲ. ಹೀಗಾಗಿ ಟಿ20 ವಿಶ್ವಕಪ್ಗೆ ಅಲಭ್ಯರಾದರೆ, ಟಿಮ್ ಡೇವಿಡ್ ಆರ್ಸಿಬಿ ತಂಡದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.
Published On - 7:33 am, Tue, 30 December 25
