- Kannada News Photo gallery Cricket photos TNPL 2023: Guruswamy Ajitesh and Rithik Easwaran Smash Five Sixes
6,6,6,6,6: ಒಂದೇ ಓವರ್ನಲ್ಲಿ 33 ರನ್: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರಾಯಲ್ ಕಿಂಗ್ಸ್
TNPL 2023: ಪರಿಣಾಮ ಕೊನೆಯ 2 ಓವರ್ಗಳಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 37 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಕಣಕ್ಕಿಳಿದ ರಿತಿಕ್ ಈಶ್ವರನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
Updated on: Jul 11, 2023 | 3:19 PM

TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ನ 2ನೇ ಕ್ವಾಲಿಫೈಯರ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡದ ಪರ ಆರಂಭಿಕ ಆಟಗಾರ ಶಿವಂ ಸಿಂಗ್ 46 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 76 ರನ್ ಬಾರಿಸಿದ್ದರು. ಈ ಮೂಲಕ ನಿಗದಿತ 20 ಓವರ್ಗಳಲ್ಲಿ ದಿಂಡಿಗಲ್ ಡ್ರಾಗನ್ಸ್ 5 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿತು.

186 ರನ್ಗಳ ಕಠಿಣ ಗುರಿ ಪಡೆದ ನೆಲ್ಲೈ ರಾಯಲ್ ಕಿಂಗ್ಸ್ ಪರ ಅಜಿತೇಶ್ ಗುರುಸ್ವಾಮಿ ಅಕ್ಷರಶಃ ಅಬ್ಬರಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಜಿತೇಶ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 37 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಕಣಕ್ಕಿಳಿದ ರಿತಿಕ್ ಈಶ್ವರನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಜಿ. ಕಿಶೋರ್ ಎಸೆದ 19ನೇ ಓವರ್ನ ಮೊದಲ ಎಸೆತವನ್ನು ರಿತಿಕ್ ಲಾಂಗ್ ಆಫ್ನತ್ತ ಸಿಕ್ಸ್ ಬಾರಿಸಿದರು. 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಮತ್ತೊಂದು ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ರಿತಿಕ್ ಸಿಕ್ಸ್ ಸಿಡಿಸಿ ರಿತಿಕ್ ಈಶ್ವರನ್ 18 ರನ್ ಕಲೆಹಾಕಿದರು.

4ನೇ ಎಸೆತದಲ್ಲಿ ಒಂದು ರನ್ ಓಡಿದರು. ಇನ್ನು 5ನೇ ಎಸೆತ ಎದುರಿಸಿದ ಅಜಿತೇಶ್ ಗುರುಸ್ವಾಮಿ (73) ಭರ್ಜರಿ ಸಿಕ್ಸ್ ಬಾರಿಸಿದರು. 6ನೇ ಎಸೆತ ನೋಬಾಲ್...1 ರನ್ ಓಡಿದರು. ಮರು ಎಸೆತದಲ್ಲಿ ರಿತಿಕ್ ಈಶ್ವರನ್ ಫೈನ್ ಲೈಗ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದರು.

ಈ ಮೂಲಕ ರಿತಿಕ್-ಅಜಿತೇಶ್ ಜೊತೆಗೂಡಿ 19ನೇ ಓವರ್ನಲ್ಲಿ ಬರೋಬ್ಬರಿ 33 ರನ್ ಕಲೆಹಾಕಿದರು. ಅದರಂತೆ ಕೊನೆಯ ಓವರ್ನಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ 4 ರನ್ಗಳ ಗುರಿ ಪಡೆಯಿತು. ಆದರೆ ಮೊದಲ ಐದು ಎಸೆತಗಳಲ್ಲಿ ಸುಬೋತ್ ಭಾಟಿ ನೀಡಿದ್ದು ಕೇವಲ 3 ರನ್ ಮಾತ್ರ.

ಪರಿಣಾಮ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್ಗಳಿಸಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿತಿಕ್ ಈಶ್ವರನ್ (39) ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್ನ ಫೈನಲ್ಗೆ ಪ್ರವೇಶಿಸಿದೆ.









