
ರಣಜಿ ಟೂರ್ನಿಯಲ್ಲೂ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರ ಶುರುವಾಗಿದೆ. ಈ ಸಿಡಿಲಬ್ಬರದೊಂದಿಗೆ ಭರ್ಜರಿ ದಾಖಲೆ ಬರೆಯುವ ಹೊಸ್ತಿಲಿಗೆ ತಲುಪಿದ್ದರು. ಆದರೆ ಶತಕದಂಚಿನಲ್ಲಿ ಎಡವಿ 37 ವರ್ಷಗಳ ಹಳೆಯ ದಾಖಲೆ ಮುರಿಯುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

ಪಾಟ್ನಾದ ಮೊಹಿನುಲ್ ಹಕ್ ಸ್ಟೇಡಿಯಂನಲ್ಲಿ ನಡೆದ ರಣಜಿ ಪ್ಲೇಟ್ ಪಂದ್ಯದಲ್ಲಿ ಮೇಘಾಲಯ ಹಾಗೂ ಬಿಹಾರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮೊದಲ ಇನಿಂಗ್ಸ್ನಲ್ಲಿ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈ ಮ್ಯಾಚ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ವೈಭವ್ ಸೂರ್ಯವಂಶಿ 67 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಫೋರ್ಗಳೊಂದಿಗೆ 93 ರನ್ ಬಾರಿಸಿದರು.

ಆದರೆ ಶತಕಕ್ಕೆ ಇನ್ನೇನು 7 ರನ್ಗಳು ಬೇಕಿದ್ದ ವೇಳೆ ಎಲ್ಬಿಡಬ್ಲ್ಯೂ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಣಜಿ ಟೂರ್ನಿಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಬರೆಯುವ ಅವಕಾಶವನ್ನು ವೈಭವ್ ಸೂರ್ಯವಂಶಿ ಕೈಚೆಲ್ಲಿಕೊಂಡರು.

ಸದ್ಯ ಈ ದಾಖಲೆ ಧ್ರುವ್ ಪಾಂಡೋವ್ ಅವರ ಹೆಸರಿನಲ್ಲಿದೆ. 1988 ರಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಪರ ಕಣಕ್ಕಿಳಿದಿದ್ದ ಧ್ರುವ್ ಪಾಂಡೋವ್ 137 ರನ್ ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 14 ವರ್ಷ 293 ದಿನಗಳು. ಈ ಮೂಲಕ ರಣಜಿ ಟೂರ್ನಿ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ದಾಖಲೆ ನಿರ್ಮಿಸಿದ್ದರು.

ಇದೀಗ 14 ವರ್ಷ 222 ದಿನಗಳಾಗಿರುವ ವೈಭವ್ ಸೂರ್ಯವಂಶಿ ಈ ದಾಖಲೆ ಮುರಿಯುವ ಹೊಸ್ತಿಲಿಗೆ ತಲುಪಿದ್ದರು. ಆದರೆ ಶತಕದಂಚಿನಲ್ಲಿ ವಿಕೆಟ್ ಕೈ ಚೆಲ್ಲುವ ಮೂಲಕ ಭರ್ಜರಿ ರೆಕಾರ್ಡ್ ತನ್ನದಾಗಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡರು. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ವೈಭವ್ ಸೂರ್ಯವಂಶಿ ಮುಂದಿದೆ.
Published On - 7:33 am, Wed, 5 November 25