
ಪ್ರಸ್ತುತ ಅತ್ಯುತ್ತಮ ಫಾರ್ಮ್ನಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದಿನಿಂದ ಆರಂಭವಾಗಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಅದನ್ನು ಮುಂದುವರೆಸಿದರು. ಕಳೆದ 4 ಪಂದ್ಯಗಳಲ್ಲಿ 50 ಪ್ಲಸ್ ರನ್ ಕಲೆಹಾಕಿದ್ದ ಕೊಹ್ಲಿ, ಕಿವೀಸ್ ವಿರುದ್ಧವೂ ಮತ್ತೊಂದು ಅರ್ಧಶತಕದ ಇನ್ನಿಂಗ್ಸ್ ಆಡಿದರು.

ರೋಹಿತ್ ವಿಕೆಟ್ ಪತನದ ಬಳಿಕ ಮೈದಾನಕ್ಕೆ ಕಾಲಿಟ್ಟ ಕೊಹ್ಲಿ ಬೌಂಡರಿಯೊಂದಿಗೆ ತಮ್ಮ ಖಾತೆ ತೆರೆದರು. ಆ ಬಳಿಕ ಹೊಡಿಬಡಿ ಆಟದೊಂದಿಗೆ ತಂಡದ ಸ್ಕೋರ್ ಬೋರ್ಡ್ ವೇಗ ಹೆಚ್ಚಿಸಿದ ಕೊಹ್ಲಿ 25 ರನ್ ಕಲೆಹಾಕುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 28 ಸಾವಿರ ರನ್‌ಗಳ ಗಡಿ ಕೂಡ ದಾಟಿದರು.

ಆ ಬಳಿಕ ತಮ್ಮ ಖಾತೆಗೆ 42 ರನ್‌ಗಳ ಸೇರಿದ ಬೆನ್ನಲ್ಲೇ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದರು. ಇದು ಮಾತ್ರವಲ್ಲದೆ ಕೊಹ್ಲಿ 44 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 77ನೇ ಅರ್ಧಶತಕವನ್ನು ಪೂರೈಸಿದರು.

ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಕೊಹ್ಲಿ ಶತಕದತ್ತ ಸಾಗುತ್ತಿದ್ದರು. ಇದರೊಂದಿಗೆ ಶ್ರೇಯಸ್ ಜೊತೆಗೂಡಿ ತಂಡವನ್ನು ಸಹ 200 ರನ್‌ಗಳ ಗಡಿ ದಾಟಿಸಿದರು. ಆದರೆ 93 ರನ್ ಬಾರಿಸಿ ಶತಕದತ್ತ ಸಾಗುತ್ತಿದ್ದ ಕೊಹ್ಲಿ ಜೇಮಿಸನ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿ ಬ್ರೇಸ್ವೆಲ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಮೌನ ಸಾಗರದಲ್ಲಿ ಮುಳುಗಿತು. ಕೊಹ್ಲಿ ಕೂಡ ಬೇಸರದಲ್ಲಿ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು. ಈ ಪಂದ್ಯದಲ್ಲಿ ಕೊಹ್ಲಿ ಇನ್ನು 7 ರನ್ ಕಲೆಹಾಕಿದರೆ, ತಮ್ಮ ಏಕದಿನ ವೃತ್ತಿಜೀವನದ 54ನೇ ಏಕದಿನ ಶತಕವನ್ನು ಪೂರೈಸುವುದರೊಂದಿಗೆ, ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುತ್ತಿದ್ದರು.

ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಕೊಹ್ಲಿ ತಲಾ 6 ಶತಕಗಳೊಂದಿಗೆ ಅಗ್ರಸ್ಥಾನದಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದರೆ 7ನೇ ಶತಕದೊಂದಿಗೆ ಸೆಹ್ವಾಗ್ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುತ್ತಿದ್ದರು. ಆದರೆ ಕೇವಲ 7 ರನ್‌ಗಳಿಂದ ಕೊಹ್ಲಿ ಈ ದಾಖಲೆಯಿಂದ ವಂಚಿತರಾದರು.