
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿಯು ಡಿಸೆಂಬರ್ 6 ರಂದು ಮುಗಿಯಲಿದೆ. ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದರಂತೆ ಡಿಸೆಂಬರ್ 24 ರಿಂದ ಶುರುವಾಗಲಿರುವ ವಿಜಯ ಹಝಾರೆ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಕಾಣಿಸಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ರೋಹಿತ್ ಶರ್ಮಾ ಮುಂಬೈ ಪರ ಆಡಲಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಎಷ್ಟು ಪಂದ್ಯಗಳನ್ನಾಡಲಿದ್ದಾರೆ ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಇದಾಗ್ಯೂ ನ್ಯೂಝಿಲೆಂಡ್ ವಿರುದ್ಧದ ಸರಣಿಯವರೆಗೆ ದೇಶೀಯ ಟೂರ್ನಿಯಲ್ಲಿ ಮುಂದುವರೆಯುವ ಸಾಧ್ಯತೆಯಿದೆ.

ಇನ್ನು ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ ಐದು ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು.

ರೋಹಿತ್ ಶರ್ಮಾ ವಿಜಯ ಹಝಾರೆ ಟೂರ್ನಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು 2019 ರಲ್ಲಿ. ಮುಂಬೈ ಪರ ಎರಡು ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದ ಹಿಟ್ಮ್ಯಾನ್ ಒಟ್ಟು 50 ರನ್ ಕಲೆಹಾಕಿದ್ದರು. ಇದಾದ ಬಳಿಕ ದೇಶೀಯ ಏಕದಿನ ಟೂರ್ನಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿರಲಿಲ್ಲ.

ಇದೀಗ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಹಾಗೂ ರೋಹಿತ್ ಶರ್ಮಾ 7 ವರ್ಷಗಳ ನಂತರ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಟೂರ್ನಿಯಲ್ಲಿ ದೆಹಲಿ ಮತ್ತು ಮುಂಬೈ ತಂಡಗಳು ನಾಕೌಟ್ಗೆ ಪ್ರವೇಶಿಸಿದರೆ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಮುಖಾಮುಖಿಯಾಗಬಹುದು.