ಟೀಮ್ ಇಂಡಿಯಾದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಇಂದಿನಿಂದ (ಫೆ.20) ಶುರುವಾಗಲಿದೆ. ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಮಿಂಚಿದರೆ ಹೊಸ ವಿಶ್ವ ದಾಖಲೆಯೊಂದು ನಿರ್ಮಾಣವಾಗಲಿದೆ.
ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ 5 ವಿಶ್ವ ದಾಖಲೆಗಳನ್ನು ನಿರ್ಮಿಸಬಹುದು. ಆ ದಾಖಲೆಗಳಾವುವು, ಈ ದಾಖಲೆ ನಿರ್ಮಾಣಕ್ಕೆ ವಿರಾಟ್ ಕೊಹ್ಲಿ ಎಷ್ಟು ರನ್ಗಳಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ....
14000 ರನ್ಸ್: ಏಕದಿನ ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಬೇಕಿರುವುದು ಕೇವಲ 37 ರನ್ಗಳು ಮಾತ್ರ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 37 ರನ್ ಬಾರಿಸಿದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 14000 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಟಾಪ್-3 ರನ್ ಸರಾದರ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟಾಪ್-3 ರನ್ ಸರದಾರ ಎನಿಸಿಕೊಳ್ಳಲು ವಿರಾಟ್ ಕೊಹ್ಲಿ 105 ರನ್ಗಳನ್ನು ಬಾರಿಸಿದರೆ ಸಾಕು. ಈವರೆಗೆ 27,381 ರನ್ಗಳಿಸಿರುವ ಕೊಹ್ಲಿ ಸದ್ಯ 4ನೇ ಸ್ಥಾನದಲ್ಲಿದ್ದು, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ 3ನೇ ಬ್ಯಾಟರ್ ಎನಿಸಿಕೊಳ್ಳಬಹುದು.
ಅತ್ಯಧಿಕ ಸ್ಕೋರರ್: ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಈವರೆಗೆ 529 ರನ್ ಗಳಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 263 ರನ್ ಬಾರಿಸಿದರೆ, ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ರಿಸ್ ಗೇಲ್ ಅವರ 791 ರನ್‌ಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಬಹುದು.
ಅತೀ ಹೆಚ್ಚು ಅರ್ಧಶತಕ: ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಈವರೆಗೆ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೀಮ್ ಇಂಡಿಯಾ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ 6 ಅರ್ಧಶತಕ ಸಿಡಿಸಿರುವ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿಯಲು ಕಿಂಗ್ ಕೊಹ್ಲಿ ಬಾರಿ 2 ಹಾಫ್ ಸೆಂಚುರಿ ಬಾರಿಸಿದರೆ ಸಾಕು.
ಟ್ರೋಫಿಗಳ ಸರದಾರ: ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅತೀ ಹೆಚ್ಚು ಐಸಿಸಿ ಟ್ರೋಫಿ ಗೆದ್ದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಕಿಂಗ್ ಕೊಹ್ಲಿ ಈವರೆಗೆ 4 ಐಸಿಸಿ ಟ್ರೋಫಿ ಗೆದ್ದಿದ್ದಾರೆ. ಇದೀಗ ರಿಕಿ ಪಾಂಟಿಂಗ್ (5) ಹೆಸರಿನಲ್ಲಿರುವ ವಿಶ್ವ ದಾಖಲೆ ಸರಿಗಟ್ಟಲು ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕಿದೆ.