ಈ ಬಾರಿಯ ಏಷ್ಯಾಕಪ್ನಲ್ಲಿ ಐದು ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ ಮಿಂಚಿದ್ದು ವಿರಾಟ್ ಕೊಹ್ಲಿ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ 5 ಇನಿಂಗ್ಸ್ ಮೂಲಕ 276 ರನ್ ಕಲೆಹಾಕಿದ್ದರು.
ವಿಶೇಷ ಎಂದರೆ 276 ರನ್ಗಳೊಂದಿಗೆ ಏಷ್ಯಾಕಪ್ನಲ್ಲೂ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ಗಳಿಸಿದ ಸರದಾರನಾಗಿ ಎಂಬುದು ವಿಶೇಷ.
ಅಂದರೆ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಇದೀಗ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ಈ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರು.
ಸಚಿನ್ ತೆಂಡೂಲ್ಕರ್ ಏಷ್ಯಾಕಪ್ನಲ್ಲಿ 971 ರನ್ ಕಲೆಹಾಕುವ ಮೂಲಕ ಭಾರತದ ಪರ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಆದರೆ ಈ ಬಾರಿಯ ಏಷ್ಯಾಕಪ್ ಮೂಲಕ ರೋಹಿತ್ ಶರ್ಮಾ ಈ ದಾಖಲೆಯನ್ನು ಮುರಿದಿದ್ದರು.
ಹಿಟ್ಮ್ಯಾನ್ 1016 ರನ್ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು. ವಿಶೇಷ ಎಂದರೆ ಈ ದಾಖಲೆ ನಿರ್ಮಾಣವಾಗಿ ದಿನಗಳ ಅಂತರದಲ್ಲಿ ಸೆಂಚುರಿ ಸಿಡಿಸಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಇದೀಗ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ ಏಷ್ಯಾಕಪ್ನಲ್ಲಿ ಒಟ್ಟು 1042 ರನ್ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಏಷ್ಯಾಕಪ್ನಲ್ಲಿನ ಟೀಮ್ ಇಂಡಿಯಾದ ನಂಬರ್ ಒನ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇನ್ನು ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಒಟ್ಟಾರೆ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ. ಜಯಸೂರ್ಯ ಏಷ್ಯಾಕಪ್ನಲ್ಲಿ 1220 ರನ್ ಕಲೆಹಾಕುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇದೀಗ ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿ 180 ರನ್ಗಳ ಅವಶ್ಯಕತೆಯಿದೆ. ಆದರೆ ಕಿಂಗ್ ಕೊಹ್ಲಿ 2 ವರ್ಷಗಳ ಬಳಿಕ ಮತ್ತೆ ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.
Published On - 4:29 pm, Sat, 10 September 22