Updated on: Feb 06, 2022 | 9:19 PM
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಗಳಿಸಿದ್ದು ಕೇವಲ 8 ರನ್ ಮಾತ್ರ. ಅದು ಕೂಡ ಎರಡು ಫೋರ್ಗಳನ್ನು ಬಾರಿಸುವ ಮೂಲಕ ಎಂಬುದು. ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕೊಹ್ಲಿ ಆ ಬಳಿಕ ಅಲ್ಝಾರಿ ಜೋಸೆಫ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು.
ಆದರೆ ಕೊಹ್ಲಿ ಈ ಎರಡು ಬೌಂಡರಿ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೌದು, ವೆಸ್ಟ್ ಇಂಡೀಸ್ ವಿರುದ್ದ 8 ರನ್ಗಳಿಸುವ ಮೂಲಕ ಭಾರತದಲ್ಲಿ ಏಕದಿನ ಕ್ರಿಕೆಟ್ನಲ್ಲಿ 5 ಸಾವಿರ ಬಾರಿಸಿದ ಟೀಮ್ ಇಂಡಿಯಾದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದರು.
ಅಷ್ಟೇ ಅಲ್ಲದೆ ತವರಿನಲ್ಲಿ ಏಕದಿನ ಕ್ರಿಕೆಟ್ನಲ್ಲಿ 5 ಸಾವಿರಕ್ಕೂ ಅಧಿಕ ರನ್ ಬಾರಿಸಿದ ವಿಶ್ವದ 4ನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ಕೊಹ್ಲಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಭಾರತದಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದರು. ಇದೀಗ ಈ ಸಾಧನೆ ಮಾಡಿದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಕೊಹ್ಲಿ ಪಾಲಾಗಿದೆ.
ಈ ಪಟ್ಟಿಯಲ್ಲಿ ಸದ್ಯ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಮಾಸ್ಟರ್ ಬ್ಲಾಸ್ಟರ್ ಭಾರತದಲ್ಲಿ ಮಾತ್ರ 6976 ರನ್ ಕಲೆಹಾಕಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ ಇದ್ದು, ಪಾಟಿಂಗ್ ಆಸ್ಟ್ರೇಲಿಯಾದಲ್ಲಿ ಮಾತ್ರ 5521 ರನ್ ಬಾರಿಸಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ 5186 ರನ್ ಬಾರಿಸಿರುವ ಜಾಕ್ ಕಾಲಿಸ್ ಮೂರನೇ ಸ್ಥಾನದಲ್ಲಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಭಾರತದಲ್ಲಿ ಏಕದಿನ ಕ್ರಿಕೆಟ್ನಲ್ಲಿ 5002 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ, ವಿಶ್ವದ ನಾಲ್ಕನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.
Virat kohli