
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿವೆ. ಹೀಗಾಗಿ ಸರಣಿಯ ಅಂತಿಮ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಈ ಪಂದ್ಯ ಡಿಸೆಂಬರ್ 6, 2025 ರಂದು ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ- ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೇಲೆ ಹೇಳಿದಂತೆ ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸರಣಿ ಕೈಸೇರಲಿದೆ. ಆದ್ದರಿಂದ ಎರಡು ತಂಡಗಳು ಗೆಲ್ಲುವ ಒತ್ತಡದಲ್ಲಿವೆ. ಹೀಗಾಗಿ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದಿದ್ದಾರೆ. ಅದರಲ್ಲೂ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶತಕಗಳ ಮೇಲೆ ಶತಕ ಬಾರಿಸುತ್ತಿರುವುದು ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆದುಕೊಂಡು ಬರುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸಿದೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಶತಕ ಬಾರಿಸಿರುವ ಪರಿಣಾಮದಿಂದಾಗಿ ವಿಶಾಖಪಟ್ಟಣಂನಲ್ಲಿ ಟಿಕೆಟ್ ಮಾರಾಟದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ವರದಿಯ ಪ್ರಕಾರ, ರಾಂಚಿಯಲ್ಲಿ ವಿರಾಟ್ ಶತಕದ ನಂತರ , ವಿಶಾಖಪಟ್ಟಣಂ ಪಂದ್ಯದ ಟಿಕೆಟ್ ಮಾರಾಟವು ಗಮನಾರ್ಹ ಏರಿಕೆ ಕಂಡಿತು, ಇದು ಕೊಹ್ಲಿಯ ಮ್ಯಾಜಿಕ್‌ಗೆ ಸಾಕ್ಷಿಯಾಗಿದೆ. ಈ ಶತಕವು ಕೊನೆಯ ಏಕದಿನ ಪಂದ್ಯದ ಟಿಕೆಟ್‌ಗಳ ಬೇಡಿಕೆಯನ್ನು ಗಗನಕ್ಕೇರಿಸಿದೆ.

ವಾಸ್ತವವಾಗಿ, ಮೂರನೇ ಏಕದಿನ ಪಂದ್ಯದ ಮೊದಲ ಸುತ್ತಿನ ಟಿಕೆಟ್‌ಗಳನ್ನು ನವೆಂಬರ್ 28 ರಂದು ಮಾರಾಟಕ್ಕೆ ಬಿಡಲಾಯಿತು. ಆದರೆ ಹೆಚ್ಚಿನ ಟಿಕೆಟ್‌ಗಳು ಅಂದು ಮಾರಾಟವಾಗಿರಲಿಲ್ಲ. ನಂತರ ನವೆಂಬರ್ 30 ರಂದು ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 135 ರನ್ ಬಾರಿಸಿದರು. ಇದರ ಪರಿಣಾಮವಾಗಿ ಡಿಸೆಂಬರ್ 1 ಮತ್ತು 3 ನೇ ತಾರೀಖಿನ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಾದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.

ಈ ಪಂದ್ಯದ ಟಿಕೆಟ್ ಬೆಲೆಯನ್ನು 1,200 ರಿಂದ 18,000 ವರೆಗೆ ನಿಗದಿ ಮಾಡಲಾಗಿತ್ತು. ಆದಾಗ್ಯೂ ಒಂದೇ ಒಂದು ಟಿಕೆಟ್ ಕೂಡ ಮಾರಾಟವಾಗದೆ ಉಳಿದಿಲ್ಲ. ವಿರಾಟ್ ಅವರ ಶತಕವು ಟಿಕೆಟ್ ಮಾರಾಟವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಅಭಿಮಾನಿಗಳಲ್ಲಿ ಈ ಪಂದ್ಯದ ಉತ್ಸಾಹವನ್ನು ಹೆಚ್ಚಿಸಿದೆ. ರಾಂಚಿಯಲ್ಲಿ ಕೊಹ್ಲಿ ಅವರ ಇನ್ನಿಂಗ್ಸ್ ನೋಡಿದ ತಕ್ಷಣ ಅವರ ಅಭಿಮಾನಿಗಳು ಟಿಕೆಟ್ ಖರೀದಿಸಲು ಪ್ರಾರಂಭಿಸಿದರು ಎಂದು ಸ್ಥಳೀಯ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೈದಾನ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದೆ . ಈ ಮೈದಾನದಲ್ಲಿ ಇಲ್ಲಿಯವರೆಗೆ ಏಳು ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ, 97.83 ಸರಾಸರಿಯಲ್ಲಿ 587 ರನ್ ಗಳಿಸಿದ್ದಾರೆ.ಇದರಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಇದಲ್ಲದೆ, ಕೊಹ್ಲಿ ವಿಶಾಖಪಟ್ಟಣದಲ್ಲಿ ಆಡಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 299 ರನ್ ಗಳಿಸಿದ್ದಾರೆ.
Published On - 3:06 pm, Fri, 5 December 25