
ಟೀಮ್ ಇಂಡಿಯಾ ಏಕದಿನ ತಂಡದ ನೂತನ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಇನ್ಮುಂದೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಮಾತ್ರ ಮುನ್ನಡೆಸಲಿದ್ದಾರೆ. ಈ ಹಿಂದೆ ಟಿ20 ತಂಡಕ್ಕೆ ರಾಜೀನಾಮೆ ನೀಡಿದ್ದ ಕೊಹ್ಲಿ, ಏಕದಿನ ಹಾಗೂ ಟೆಸ್ಟ್ ತಂಡವನ್ನು ಮುನ್ನಡೆಸುವ ಇಂಗಿತ ಹೊಂದಿದ್ದರು. ಇದಾಗ್ಯೂ ಇದೀಗ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಸಲಾಗಿದೆ.

ಆದರೆ ಇಲ್ಲಿ ವಿರಾಟ್ ಕೊಹ್ಲಿಯನ್ನು ಯಾಕಾಗಿ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಸಲಾಗಿದೆ ಎಂಬುದಕ್ಕೆ ಆಯ್ಕೆ ಸಮಿತಿ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ. ಏಕೆಂದರೆ ಭಾರತ ಏಕದಿನ ತಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. 2017 ರಿಂದ ಏಕದಿನ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಇದುವರೆಗೆ 95 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಸಾರಥ್ಯವಹಿಸಿದ್ದಾರೆ.

ಟೀಮ್ ಇಂಡಿಯಾವನ್ನು ಸತತವಾಗಿ 50 ಕ್ಕೂ ಅಧಿಕ ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕರ ಪಟ್ಟಿಯನ್ನು ತೆಗೆದುಕೊಂಡರೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿ ಭಾರತದ ಯಶಸ್ವಿ ನಾಯಕ ಎಂದು ಕರೆಯಲ್ಪಡುವ ಧೋನಿಗಿಂತ ವಿರಾಟ್ ಕೊಹ್ಲಿ ಮುಂದಿರುವುದು ವಿಶೇಷ.

ಅಂದರೆ ಮಹೇಂದ್ರ ಸಿಂಗ್ ಧೋನಿ ಭಾರತ ಏಕದಿನ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಗೆದ್ದಿರೋದು 110 ಪಂದ್ಯಗಳನ್ನು. ಹಾಗೆಯೇ ಮೊಹಮ್ಮದ್ ಅಜರುದ್ದೀನ್ 174 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಏಕದಿನ ತಂಡವನ್ನು ಮುನ್ನಡೆಸಿ 90 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರು. ಅದೇ ರೀತಿ 146 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಏಕದಿನ ತಂಡವನ್ನು ಮುನ್ನಡೆಸಿದ್ದ ಸೌರವ್ ಗಂಗೂಲಿ 76 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು.

ಅಂದರೆ ಇಲ್ಲಿ ಧೋನಿಯ ಗೆಲುವಿನ ಸರಾಸರಿ ಶೇ 59.52 ರಷ್ಟಿದ್ದರೆ, ಅಜರ್ ಅವರ ಗೆಲುವಿನ ಸರಾಸರಿ ಶೇ 54.16 ರಷ್ಟಿದೆ. ಹಾಗೆಯೇ ಸೌರವ್ ಗಂಗೂಲಿ ಅವರ ಗೆಲುವಿನ ಪರ್ಸಂಟೇಜ್ ಶೇ 53.90 ರಷ್ಟಿದೆ. ಆದರೆ 95 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ಭಾರತಕ್ಕೆ 65 ಗೆಲುವು ತಂದುಕೊಟ್ಟಿದ್ದಾರೆ. ಇನ್ನು ಸೋತಿರುವುದು ಕೇವಲ 27 ಪಂದ್ಯಗಳಲ್ಲಿ ಮಾತ್ರ. ಅಂದರೆ ವಿರಾಟ್ ಕೊಹ್ಲಿಯ ಗೆಲುವಿನ ಶೇಕಡಾವಾರು 70.43 ರಷ್ಟಿದೆ.

ವರ್ಷಕಾಲ ಟೀಮ್ ಇಂಡಿಯಾದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ನಾಯಕರ ಗೆಲುವಿನ ಶೇಕಡಾವಾರನ್ನು ಗಣನೆಗೆ ತೆಗೆದುಕೊಂಡರೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿರುವುದು ಸ್ಪಷ್ಟ. ಅಂದರೆ ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕರು ಎನಿಸಿಕೊಂಡಿರುವ ಧೋನಿ, ಅಜರ್, ಗಂಗೂಲಿ ಅವರಿಗಿಂತ ವಿರಾಟ್ ಕೊಹ್ಲಿಯ ಗೆಲುವಿನ ಸರಾಸರಿ ( ಶೇ 70.43) ಹೆಚ್ಚಿದೆ. ಇದಾಗ್ಯೂ ಅವರ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲ್ಲಲಾಗಿಲ್ಲ ಎಂಬ ಒಂದೇ ಒಂದು ಕಾರಣದಿಂದ ಬಿಸಿಸಿಐ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಸಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.