ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡ ಮುಖಾಮುಖಿ ಆಗಲಿದೆ.
ಆರ್ಸಿಬಿ ಮತ್ತೊಮ್ಮೆ ತಮ್ಮ ಸ್ಟಾರ್-ಸ್ಟಡ್ ಬ್ಯಾಟಿಂಗ್ ಲೈನ್ಅಪ್ ಮೇಲೆ ಭರವಸೆ ಇಟ್ಟಿದೆ. ಬೌಲಿಂಗ್‌ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಆರ್ಸಿಬಿ ತಮ್ಮ ತಂಡದ ಸಂಯೋಜನೆ ಯೋಚನೆ ಮಾಡಿ ರೂಪಿಸಬೇಕು. ಹಾಗಾದರೆ, ಸಿಎಸ್ಕೆ ವಿರುದ್ಧದ ಇಂದಿನ ಪಂದ್ಯಕ್ಕೆ ಆರ್ಸಿಬಿಯ ಪ್ಲೇಯಿಂಗ್ XI ಹೇಗಿರಬಹುದು ಎಂಬುದನ್ನು ನೋಡೋಣ.
ಕಳೆದ ಋತುವಿನಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ಜೋಡಿ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಈ ಬಾರಿ ಕೆಲ ಬದಲಾವಣೆ ಮಾಡಬಹುದು. ಫಾಫ್ ಜೊತೆ ಮುಂಬೈ ಇಂಡಿಯನ್ಸ್ನಿಂದ 17.50 ಕೋಟಿ ರೂ. ಗೆ ಖರೀದಿಸಿದ ಕ್ಯಾಮರೂನ್ ಗ್ರೀನ್ ಇನ್ನಿಂಗ್ಸ್ ತೆರೆಯಬಹುದು.
ಎರಡು ತಿಂಗಳ ಅಂತರದ ಬಳಿಕ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ಇಂಜುರಿಯ ಕಾರಣ ಐಪಿಎಲ್ 2023 ರ ನಂತರ, ರಜತ್ ಪಾಟಿದಾರ್ ಈ ಬಾರಿ ಆಡಲು ಫಿಟ್ ಆಗಿದ್ದಾರೆ. ಆರ್ಸಿಬಿಗಾಗಿ ಇವರು ನಂ. 4 ರಲ್ಲಿ ಬ್ಯಾಟ್ ಮಾಡುತ್ತಾರೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಆರ್‌ಸಿಬಿಗೆ ಪ್ರಮುಖ ಆಟಗಾರನಾಗಲಿದ್ದಾರೆ. ಮ್ಯಾಕ್ಸ್‌ವೆಲ್ ಅವರ ಆಲ್-ರೌಂಡ್ ಸಾಮರ್ಥ್ಯಗಳನ್ನು ತಂಡ ಬಳಸಿಕೊಳ್ಳಬೇಕು. ದಿನೇಶ್ ಕಾರ್ತಿಕ್ ಐಪಿಎಲ್ 2024 ರಲ್ಲಿ ಆರ್ಸಿಬಿಗಾಗಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುತ್ತಾರೆ. ಇದು ಇವರ ಕೊನೆಯ ಐಪಿಎಲ್ ಎಂದುಕೂಡ ಹೇಳಲಾಗಿದೆ.
ಆರ್‌ಸಿಬಿಗೆ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ನಲ್ಲಿ ಮಹಿಪಾಲ್ ಲೊಮ್ರೋರ್ ಇದ್ದಾರೆ. ಅಂತೆಯೆ ಕರ್ಣ್ ಶರ್ಮಾ ಐಪಿಎಲ್ 2024 ರಲ್ಲಿ RCB ಗೆ ಮೊದಲ ಆಯ್ಕೆಯ ಸ್ಪಿನ್ನರ್. ಮೊಹಮ್ಮದ್ ಸಿರಾಜ್ ತಂಡದ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಇವರಿಗೆ ರೀಸ್ ಟೋಪ್ಲೆ ಸಾಥ್ ನೀಡಬಹುದು. ಭಾರತದ ಎರಡನೇ ವೇಗಿಯಾಗಿ ಯಶ್ ದಯಾಳ್ ಮತ್ತು ವಿಜಯ್ ಕುಮಾರ್ ವೈಶಾಕ್ ಅವರಿಗಿಂತ ಆಕಾಶ್ ದೀಪ್ ಮೊದಲ ಆದ್ಯತೆ ಪಡೆಯಲಿದ್ದಾರೆ.