ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ 2025 ರ ಅಂತಿಮ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 251 ರನ್ಗಳ ಟಾರ್ಗೆಟ್ ನೀಡಿದೆ. ಕಿವೀಸ್ ಪರ ಡ್ಯಾರೆಲ್ ಮಿಚೆಲ್ ಹಾಗೂ ಬ್ರೇಸ್ವೆಲ್ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು.
ಆದರೆ ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದ ಮಾಜಿ ನಾಯಕ ಹಾಗೂ ಹಾಲಿ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದರು. ಈ ಇಬ್ಬರೂ ಆಟಗಾರರು ಈಗ ವಿಶ್ವದಲ್ಲೇ ಅತಿ ಹೆಚ್ಚು ಐಸಿಸಿ ಫೈನಲ್‌ಗಳನ್ನು ಆಡಿದ ಆಟಗಾರರೆಂಬ ದಾಖಲೆ ಬರೆದಿದ್ದಾರೆ.
ಈ ಮೂಲಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ಸಹ ಹಿಂದಿಕ್ಕಿದ್ದಾರೆ. ಭಾರತಕ್ಕೆ ಎರಡೆರಡು ವಿಶ್ವಕಪ್‌ಗಳನ್ನು ಗೆಲ್ಲಿಸಿಕೊಟ್ಟಿದ್ದ ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 8 ಐಸಿಸಿ ಫೈನಲ್‌ಗಳನ್ನು ಆಡಿದ್ದಾರೆ.
ಭಾರತವನ್ನು ಹೊರತುಪಡಿಸಿ ವಿಶ್ವದಲ್ಲಿ ಅತಿ ಹೆಚ್ಚು ಐಸಿಸಿ ಫೈನಲ್‌ಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದುವರೆಗೆ ಭಾರತ ಪರ 9 ಐಸಿಸಿ ಫೈನಲ್ ಪಂದ್ಯಗಳನ್ನು ಆಡಿದ್ದಾರೆ.
ಇನ್ನು ಅತಿ ಹೆಚ್ಚು ಐಸಿಸಿ ಫೈನಲ್‌ಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳಲ್ಲಿ ಇದ್ದರೆ, ಇದೀಗ ಯುವರಾಜ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ರವೀಂದ್ರ ಜಡೇಜಾ 8 ಫೈನಲ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಕುಮಾರ್ ಸಂಗಕ್ಕಾರ ಮತ್ತು ಆರನೇ ಸ್ಥಾನದಲ್ಲಿ ಮಹೇಲ್ ಜಯವರ್ಧನೆ ತಲಾ 7 ಫೈನಲ್‌ಗಳೊಂದಿಗೆ ಪಟ್ಟಿಯಲ್ಲಿದ್ದಾರೆ.