
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದು ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಂಬುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ದೀರ್ಘಾವಧಿಯ ಬಳಿಕ ದೇಶೀಯ ಟೂರ್ನಿ ಆಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹೆಸರು ಅಗ್ರಸ್ಥಾನಕ್ಕೇರಿದೆ.

ಇತ್ತೀಚೆಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದಿದ್ದರು. ಈ ಮೂಲಕ 12 ವರ್ಷಗಳ ಬಳಿಕ ಕೊಹ್ಲಿ ಮತ್ತೆ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ದೀರ್ಘಾವಧಿಯ ಬಳಿಕ ರಣಜಿ ಪಂದ್ಯವಾಡುವ ಮೂಲಕ ಕೊಹ್ಲಿ ಪಾಕ್ ತಂಡದ ಮಾಜಿ ನಾಯಕನ ದಾಖಲೆ ಮುರಿದಿದ್ದಾರೆ.

ಅಂದರೆ ಕನಿಷ್ಠ 50 ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರನು ತನ್ನ ದೇಶದ ಪ್ರಮುಖ ಪ್ರಥಮ ದರ್ಜೆ ಟೂರ್ನಿಯಲ್ಲಿ ದೀರ್ಘಾವಧಿಯವರೆಗೆ ಭಾಗವಹಿಸದೇ ಇದ್ದಂತಹ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹೆಸರಿನಲ್ಲಿತ್ತು. ಅಕ್ರಮ್ 11 ವರ್ಷಗಳ ಕಾಲ ದೇಶೀಯ ಟೂರ್ನಿಯಿಂದ ಹೊರಗುಳಿದು, ಆ ಬಳಿಕ ಪ್ರಥಮ ದರ್ಜೆ ಪಂದ್ಯವಾಡಿದ್ದರು.

ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಅಳಿಸಿ ಹಾಕಿದ್ದಾರೆ. ಕಿಂಗ್ ಕೊಹ್ಲಿ 12 ವರ್ಷ, 86 ದಿನಗಳ ಬಳಿಕ ರಣಜಿ ಟೂರ್ನಿ ಆಡಿ, ದೀರ್ಘಾವಧಿಯ ಬಳಿಕ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಂಡ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ರಣಜಿ ಕಂಬ್ಯಾಕ್ನಲ್ಲೂ ಕಿಂಗ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇನ್ನು 12 ವರ್ಷಗಳ ಬಳಿಕ ರಣಜಿ ಪಂದ್ಯವಾಡಿದ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 6 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಈ ಪಂದ್ಯದಲ್ಲಿ ದೆಹಲಿ ತಂಡ ಜಯ ಸಾಧಿಸಿದೆ. ಈ ಮ್ಯಾಚ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ ರೈಲ್ವೇಸ್ 241 ರನ್ ಬಾರಿಸಿದರೆ, ದೆಹಲಿ 374 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ರೈಲ್ವೇಸ್ ತಂಡವು 114 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ದೆಹಲಿ ಪಡೆ ಇನಿಂಗ್ಸ್ ಹಾಗೂ 19 ರನ್ಗಳ ಭರ್ಜರಿ ಜಯ ಸಾಧಿಸಿದೆ.