100ನೇ ಪಂದ್ಯದೊಂದಿಗೆ ನಿವೃತ್ತಿ ಘೋಷಿಸಿದ ದಿಮುತ್ ಕರುಣರತ್ನೆ
Sri Lanka vs Australia, 2nd Test: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ಫೆಬ್ರವರಿ 10 ರಿಂದ ಶುರುವಾಗಲಿದೆ. ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಲಂಕಾ ತಂಡದ ಆರಂಭಿಕ ಬ್ಯಾಟರ್ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ಗೆ ವಿದಾಯ ಹೇಳಲಿದ್ದಾರೆ.
Updated on:Feb 04, 2025 | 12:53 PM

ಶ್ರೀಲಂಕಾ ತಂಡದ ಸ್ಟಾರ್ ಆಟಗಾರ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅದು ಕೂಡ ತಮ್ಮ 100ನೇ ಟೆಸ್ಟ್ ಪಂದ್ಯದ ಮೂಲಕ ಎಂಬುದು ವಿಶೇಷ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ದಿಮುತ್ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಲಿದ್ದಾರೆ.

ಈ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಕೊನೆಗೊಳಿಸಲು ದಿಮುತ್ ಕರುಣರತ್ನೆ ನಿರ್ಧರಿಸಿದ್ದಾರೆ. ಅದರಂತೆ ಫೆಬ್ರವರಿ 10 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ದಿಮುತ್ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ.

36 ವರ್ಷದ ದಿಮುತ್ ಕರುಣರತ್ನೆ ಶ್ರೀಲಂಕಾ ಪರ ಈವರೆಗೆ 99 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 189 ಇನಿಂಗ್ಸ್ ಆಡಿರುವ ಅವರು 1 ದ್ವಿಶತಕ, 16 ಶತಕಗಳೊಂದಿಗೆ ಒಟ್ಟು 7172 ರನ್ ಕಲೆಹಾಕಿದ್ದಾರೆ. ಹಾಗೆಯೇ 39 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

ಇನ್ನು ಶ್ರೀಲಂಕಾ ಪರ 50 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ದಿಮುತ್ ಕರುಣರತ್ನೆ 46 ಇನಿಂಗ್ಸ್ಗಳಿಂದ ಒಟ್ಟು 1316 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

2011 ರಲ್ಲಿ ಶುರುವಾದ ಅಂತಾರಾಷ್ಟ್ರೀಯ ಕೆರಿಯರ್ ಅನ್ನು ದಿಮುತ್ ಕರುಣರತ್ನೆ ಅಂತ್ಯಗೊಳಿಸಲು ನಿರ್ಧರಿಸಿದ್ದು, ಅದರಂತೆ ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ.
Published On - 12:53 pm, Tue, 4 February 25
























