IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಲ್ಲವಾ?
IPL 2025 Virat Kohli: ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 66 ಪಂದ್ಯಗಳಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿದೆ. ಹಾಗೆಯೇ 2016 ರಲ್ಲಿ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ ಫೈನಲ್ಗೆ ಪ್ರವೇಶಿಸಿತ್ತು. ಇದೀಗ ಆರ್ಸಿಬಿ ತಂಡದ ನಾಯಕತ್ವದ ರೇಸ್ನಲ್ಲಿ ಕಿಂಗ್ ಕೊಹ್ಲಿ ಹೆಸರು ಮುಂಚೂಣಿಯಲ್ಲಿದೆ.
Updated on:Feb 05, 2025 | 10:27 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಇದಾಗ್ಯೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವವರು ಯಾರೆಂಬುದು ನಿರ್ಧಾರವಾಗಿಲ್ಲ. ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಈ ಬಾರಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಹೀಗಾಗಿ ಆರ್ಸಿಬಿ ಈ ಬಾರಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ.

ಇತ್ತ ನಾಯಕತ್ವದ ರೇಸ್ನಲ್ಲಿ ವಿರಾಟ್ ಕೊಹ್ಲಿ ಹೆಸರು ಮುಂಚೂಣಿಯಲ್ಲಿದೆ. ಇದಾಗ್ಯೂ ಅವರೇ ನಾಯಕ ಎಂಬುದನ್ನು ಇದುವರೆಗೆ ಆರ್ಸಿಬಿ ಫ್ರಾಂಚೈಸಿ ಖಚಿತಪಡಿಸಿಲ್ಲ. ಇದೀಗ ಕ್ಯಾಪ್ಟನ್ ಆಯ್ಕೆ ವಿಷಯದಲ್ಲಿ ನಮಗೆ ಹಲವು ಆಯ್ಕೆಗಳಿವೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಆರ್ಸಿಬಿ ಸಿಒಒ ರಾಜೇಶ್ ಮೆನನ್.

ಸ್ಪೋರ್ಟ್ಸ್ ತಕ್ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜೇಶ್ ಮೆನನ್, ಆರ್ಸಿಬಿ ನಾಯಕತ್ವದ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇಲ್ಲಿ ವಿರಾಟ್ ಕೊಹ್ಲಿ ಅವರನ್ನು ಆರ್ಸಿಬಿ ನಾಯಕರನ್ನಾಗಿ ಮಾಡುವ ಬಗ್ಗೆ ನಿರ್ಧರಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ತಂಡದಲ್ಲಿ ನಾಯಕತ್ವದ ಅನುಭವ ಹೊಂದಿರುವ ಹಲವು ಆಟಗಾರರಿದ್ದಾರೆ. ಅಲ್ಲದೆ ನಮ್ಮ ಮುಂದೆ 4-5 ಆಯ್ಕೆಗಳಿವೆ. ಈ ಆಯ್ಕೆಗಳ ಬಗ್ಗೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಅದಕ್ಕೂ ಮುಂಚಿತವಾಗಿ ಆರ್ಸಿಬಿ ತಂಡದ ಹೊಸ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರಾಜೇಶ್ ಮೆನನ್ ತಿಳಿಸಿದ್ದಾರೆ.

ಇತ್ತ ರಾಜೇಶ್ ಮೆನನ್ ಅವರ ಈ ಹೇಳಿಕೆಯ ಬೆನ್ನಲ್ಲೇ ಈ ಬಾರಿ ವಿರಾಟ್ ಕೊಹ್ಲಿಗೆ ಆರ್ಸಿಬಿ ತಂಡದ ನಾಯಕತ್ವ ನೀಡಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಈ ಹಿಂದೆ ಕೊಹ್ಲಿಗೆ ಕ್ಯಾಪ್ಟನ್ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿತ್ತು. ಆದರೀಗ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ನಾಲ್ಕೈದು ಆಯ್ಕೆಗಳಿವೆ ಎನ್ನುವ ಮೂಲಕ ಆರ್ಸಿಬಿ ಸಿಒಒ ಕುತೂಹಲ ಮೂಡಿಸಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತ. ಈ ನಾಯಕ ವಿರಾಟ್ ಕೊಹ್ಲಿ ಆಗಲಿದ್ದಾರಾ? ಅಥವಾ ಭುವನೇಶ್ವರ್ ಕುಮಾರ್ ಅಥವಾ ರಜತ್ ಪಾಟಿದಾರ್, ಇಲ್ಲಾ ಲಿಯಾಮ್ ಲಿವಿಂಗ್ಸ್ಟೋನ್ಗೆ ಕ್ಯಾಪ್ಟನ್ ಪಟ್ಟ ಸಿಗಲಿದೆಯಾ ಕಾದು ನೋಡಬೇಕಿದೆ.
Published On - 10:20 am, Wed, 5 February 25
























