- Kannada News Photo gallery Cricket photos Washington Freedon Successfully Chased Highest Score In MLC History
MLC 2025: ದಾಖಲೆಯ ರನ್ ಚೇಸ್… ಹೊಸ ಚರಿತ್ರೆ ಬರೆದ ವಾಷಿಂಗ್ಟನ್ ಫ್ರೀಡಂ
Washington Freedom vs Texas Super Kings: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 13ನೇ ಪಂದ್ಯದಲ್ಲಿ ಅಮೋಘ ಜಯ ಸಾಧಿಸುವ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ 220 ರನ್ ಕಲೆಹಾಕಿದರೆ, ಈ ಗುರಿಯನ್ನು ವಾಷಿಂಗ್ಟನ್ ಫ್ರೀಡಂ ತಂಡವು 19.4 ಓವರ್ಗಳಲ್ಲಿ ಚೇಸ್ ಮಾಡಿದೆ.
Updated on: Jun 23, 2025 | 10:32 AM

ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವು ಭರ್ಜರಿ ದಾಖಲೆ ಬರೆದಿದೆ. ಅದು ಕೂಡ ಬರೋಬ್ಬರಿ 221 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತುವ ಮೂಲಕ ಎಂಬುದು ವಿಶೇಷ. ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಾಗೂ ವಾಷಿಂಗ್ಟನ್ ಫ್ರೀಡಂ ತಂಡಗಳು ಕಣಕ್ಕಿಳಿದಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕ ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆರಂಭಿಕ ದಾಂಡಿಗ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 31 ಎಸೆತಗಳನ್ನು ಎದುರಿಸಿದ ಫಾಫ್ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 69 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಮಿಚೆಲ್ ಓವನ್ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಓವನ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಆಸೀಸ್ ದಾಂಡಿಗನ ಬ್ಯಾಟ್ನಿಂದ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 89 ರನ್ ಮೂಡಿಬಂತು.

ಮತ್ತೊಂದೆಡೆ ಮಿಚೆಲ್ ಓವನ್ಗೆ ಉತ್ತಮ ಸಾಥ್ ನೀಡಿದ ಆಂಡ್ರೀಸ್ ಗೌಸ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟೆಕ್ಸಾಸ್ ಸೂಪರ್ ಕಿಂಗ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಗೌಸ್ 45 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 80 ರನ್ ಕಲೆಹಾಕಿದರು. ಈ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡವು 19.4 ಓವರ್ಗಳಲ್ಲಿ 223 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಇದರೊಂದಿಗೆ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಚೇಸ್ ಮಾಡಿ ಗೆದ್ದ ದಾಖಲೆ ಕೂಡ ವಾಷಿಂಗ್ಟನ್ ಫ್ರೀಡಂ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಎಂಐ ನ್ಯೂಯಾರ್ಕ್ ತಂಡದ ಹೆಸರಿನಲ್ಲಿತ್ತು. ನಿಕೋಲಸ್ ಪೂರನ್ ಮುಂದಾಳತ್ವದ ಎಂಐ ನ್ಯೂಯಾರ್ಕ್ ತಂಡವು ಸಿಯಾಟಲ್ ಓರ್ಕಾಸ್ ವಿರುದ್ಧ 203 ರನ್ಗಳನ್ನು ಚೇಸ್ ಮಾಡಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದರು.

ಇದೀಗ ಟೆಕ್ಸಾಸ್ ಸೂಪರ್ ಕಿಂಗ್ಸ್ ನೀಡಿದ 221 ರನ್ಗಳನ್ನು ಬೆನ್ನತ್ತಿದ ಗ್ಲೆನ್ ಮ್ಯಾಕ್ಸ್ವೆಲ್ ಸಾರಥ್ಯದ ವಾಷಿಂಗ್ಟನ್ ಫ್ರೀಡಂ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಚೇಸ್ ಮಾಡಿದ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಹೆಸರಿನಲ್ಲಿದೆ. 2024 ರ ಐಪಿಎಲ್ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 262 ರನ್ಗಳನ್ನು ಬೆನ್ನತ್ತಿ ಪಂಜಾಬ್ ಕಿಂಗ್ಸ್ ತಂಡವು ಈ ವಿಶ್ವ ದಾಖಲೆ ನಿರ್ಮಿಸಿದೆ.
