Updated on:Jul 01, 2023 | 1:38 PM
ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಕ್ರಿಕೆಟಿಗರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಭಾರತದ ಯುವ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಈ ಲೀಗ್‌ಗೆ ಸೇರಿದ ದೇಶದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಗಸ್ಟ್ 31 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿರುವ ಈ ಲೀಗ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರವಾಗಿ ಶ್ರೇಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಆರ್‌ಸಿಬಿ ಪರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೆಸರು ಮಾಡಿದ್ದ ಶ್ರೇಯಾಂಕಾ, ಭಾರತ ಹಿರಿಯ ತಂಡಕ್ಕೆ ಆಯ್ಕೆಯಾಗುವ ಮುನ್ನವೇ ವಿದೇಶಿ ಲೀಗ್‌ನಲ್ಲಿ ಗುತ್ತಿಗೆ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ತಿಂಗಳು ನಡೆದ ಉದಯೋನ್ಮುಖ ಮಹಿಳಾ ಏಷ್ಯಾಕಪ್‌ನಲ್ಲಿ ಶ್ರೇಯಾಂಕಾ ಪಾಟೀಲ್ ಆಡಿದ 2 ಪಂದ್ಯಗಳಲ್ಲಿ 9 ವಿಕೆಟ್ ಉರುಳಿಸಿ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಇದೀಗ ಶ್ರೇಯಾಂಕ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ಮಾಜಿ ನಾಯಕಿ ಸ್ಟೆಫನಿ ಟೇಲರ್ ಅವರ ತಂಡದಲ್ಲಿ ಆಡಲಿದ್ದಾರೆ.
ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಅವರಂತಹ ಅಗ್ರ ಆಟಗಾರರೊಂದಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ಅನುಮತಿ ನೀಡಿದೆ. ಆದರೆ ಭಾರತ ತಂಡಕ್ಕೆ ಆಡದೆ ಮೊದಲ ವಿದೇಶಿ ಲೀಗ್ ಆಡುತ್ತಿರುವ ಶ್ರೇಯಾ ಶ್ರೇಯಾಂಕ ಪಾಟೀಲ್ಗೆ ಸಂದಿದೆ.
ಮಹಿಳೆಯರ ಕೆರಿಬಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಹೇಳಬೇಕೆಂದರೆ ಈ ಲೀಗ್ ಅನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು. ಕಳೆದ ವರ್ಷ ಫೈನಲ್ ಸೇರಿದಂತೆ ಒಟ್ಟು 4 ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ಇನ್ನು ಈ ವರ್ಷ ಬಾರ್ಬಡೋಸ್ ರಾಯಲ್ಸ್, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಈ ಲೀಗ್‌ನಲ್ಲಿ ಸ್ಪರ್ಧಿಸುತ್ತಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಭಾರತ ಸೇರಿದಂತೆ ಹಲವು ವಿದೇಶಿ ಆಟಗಾರ್ತಿಯರು ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published On - 12:26 pm, Sat, 1 July 23