Updated on: Jul 10, 2023 | 8:31 PM
India vs West Indies: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದವು ಜುಲೈ 12 ರಿಂದ ಶುರುವಾಗಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬುದೇ ಕುತೂಹಲ.
ಏಕೆಂದರೆ ಈ ಬಾರಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾ ಟೆಸ್ಟ್ ಬಳಗದಲ್ಲಿ ಒಟ್ಟು ನಾಲ್ವರು ಆರಂಭಿಕ ಆಟಗಾರರಿದ್ದಾರೆ. ಅವರಲ್ಲಿ ರೋಹಿತ್ ಶರ್ಮಾ ನಾಯಕರಾಗಿ ತಂಡದಲ್ಲಿ ಕಣಕ್ಕಿಳಿಸುವುದು ಖಚಿತ. ಇನ್ನುಳಿದ ಮೂವರು ಓಪನರ್ಗಳೆಂದರೆ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್. ಈ ಮೂವರಲ್ಲಿ ಒಬ್ಬರಂತು ಆರಂಭಿಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇಲ್ಲಿ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಅರ್ಧಶತಕ ಬಾರಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಜೈಸ್ವಾಲ್ ಅವರನ್ನೇ ಓಪನರ್ ಆಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.
ಒಂದು ವೇಳೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿದರೆ ಶುಭ್ಮನ್ ಗಿಲ್ ಮೂರನೇ ಸ್ಥಾನದಲ್ಲಿ ಆಡಬಹುದು. ಏಕೆಂದರೆ ಪ್ರಸ್ತುತ ತಂಡದಿಂದ ಚೇತೇಶ್ವರ ಪೂಜಾರ ಅವರನ್ನು ಕೈ ಬಿಡಲಾಗಿದೆ. ಹೀಗಾಗಿ ಪೂಜಾರ ಕಣಕ್ಕಿಳಿಯುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಹೊಸ ಬ್ಯಾಟರ್ನನ್ನು ಆಡಿಸಬೇಕಿದೆ. ಇಲ್ಲಿ ಜೈಸ್ವಾಲ್ ಆರಂಭಿಕರಾದರೆ, 3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಬೀಸುವ ಸಾಧ್ಯತೆಯಿದೆ.
ಇಲ್ಲ, ರೋಹಿತ್ ಶರ್ಮಾ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಮುಂದಾದರೆ, ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಡಬಹುದು.
ಇದಾಗ್ಯೂ ಅಭ್ಯಾಸ ಪಂದ್ಯದಲ್ಲಿ ವಿಫಲರಾಗಿರುವ ರುತುರಾಜ್ ಗಾಯಕ್ವಾಡ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗುವುದು ಅನುಮಾನ. ಅದರಂತೆ ಇನ್ನುಳಿದ ಮೂವರು ಆಟಗಾರರಲ್ಲಿ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವುದು ಯಾರು ಎಂಬುದೇ ಈಗ ಕುತೂಹಲವಾಗಿ ಮಾರ್ಪಟ್ಟಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.