
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ವೈಯುಕ್ತಿಕ ಕಾರಣಗಳಿಂದಾ ಅವರು ಹೈದರಾಬಾದ್ ಮತ್ತು ವಿಶಾಖಪಟ್ಟಣಂ ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದರು. ಅಲ್ಲದೆ ಮೂರನೇ ಟೆಸ್ಟ್ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಆದರೀಗ ಕಿಂಗ್ ಕೊಹ್ಲಿ 3ನೇ ಮತ್ತು 4ನೇ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಅಂದರೆ ರಾಜ್ಕೋಟ್ ಹಾಗೂ ರಾಂಚಿ ಟೆಸ್ಟ್ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿಯನ್ನು ನಿರೀಕ್ಷಿಸುವಂತಿಲ್ಲ.

ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕಂಬ್ಯಾಕ್ ಯಾವಾಗ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪ್ರಸ್ತುತ ಮಾಹಿತಿ ಪ್ರಕಾರ ಮಾರ್ಚ್ 7 ರಿಂದ ಶುರುವಾಗಲಿರುವ ಐದನೇ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ವಿರಾಟ್ ಕೊಹ್ಲಿಯ ಕಂಬ್ಯಾಕ್ಗಾಗಿ ಇನ್ನೂ ಒಂದು ತಿಂಗಳು ಕಾಯಬೇಕಾಗಿ ಬರಬಹುದು.

ಯಾಕಾಗಿ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯವಾಡುತ್ತಿಲ್ಲ?: ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಸಮಯ ಕಳೆಯುತ್ತಿದ್ದು, ಇದೇ ಕಾರಣದಿಂದಾಗಿ ಅವರು ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಇತ್ತೀಚೆಗೆ ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದರು.

ಇದೀಗ ಪತ್ನಿಯ ಡೆಲಿವರಿ ಡೇಟ್ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ 3ನೇ ಮತ್ತು 4ನೇ ಟೆಸ್ಟ್ ಪಂದ್ಯಗಳಿಗೂ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಅದರಂತೆ ಅವರು ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯವು ಫೆಬ್ರವರಿ 8 ರಿಂದ ಶುರುವಾಗಲಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯವು ಉಭಯ ತಂಡಗಳಿಗೂ ತುಂಬಾ ಮಹತ್ವದ್ದು. ಏಕೆಂದರೆ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದರೆ, ಭಾರತ ದ್ವಿತೀಯ ಪಂದ್ಯದಲ್ಲಿ ಜಯ ಸಾಧಿಸಿದೆ. ಇದೀಗ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಹೀಗಾಗಿ ರಾಜ್ಕೋಟ್ ಟೆಸ್ಟ್ನಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.