ಮಹಿಳಾ ಏಷ್ಯಾಕಪ್‌ನ 13ನೇ ಪಂದ್ಯದಲ್ಲಿ ಕೆಲವೇ ಜನರು ನಿರೀಕ್ಷಿಸಬಹುದಾದಂತಹ ಘಟನೆ ನಡೆದಿದೆ. ಪಾಕಿಸ್ತಾನದಂತಹ ದುರ್ಬಲ ತಂಡ ಭಾರತ ಕ್ರಿಕೆಟ್ ತಂಡವನ್ನು 13 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 137 ರನ್ ಗಳಿಸಿತು. ಉತ್ತರವಾಗಿ ಭಾರತ ತಂಡ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಈ ಪಂದ್ಯದಲ್ಲಿ ಕೆಲವು ವಿಶೇಷ ದಾಖಲೆಗಳು ಕಂಡುಬಂದವು.
ಮಹಿಳಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ, ಭಾರತ ತಂಡವನ್ನು ಮೊದಲ ಬಾರಿಗೆ ಸೋಲಿಸಿದೆ. ಇದಕ್ಕೂ ಮುನ್ನ ಏಕದಿನ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಎಲ್ಲಾ 6 ಪಂದ್ಯಗಳಲ್ಲಿ ಸೋತಿದ್ದರೆ, ಟಿ20 ಮಾದರಿಯಲ್ಲಿಯೂ ಸತತ ಐದು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ ಈ ಬಾರಿ ತನ್ನ ಸೋಲಿನ ಸರಣಿಯನ್ನು ಮುರಿದಿದೆ.
ಏಷ್ಯಾಕಪ್‌ನಲ್ಲಿ ಭಾರತವನ್ನು ಸೋಲಿಸಿದ ಎರಡನೇ ತಂಡ ಪಾಕಿಸ್ತಾನ. ಈ ಹಿಂದೆ ಬಾಂಗ್ಲಾದೇಶ ಭಾರತವನ್ನು ಸೋಲಿಸಿತ್ತು. ಬಾಂಗ್ಲಾದೇಶ 2018 ರಲ್ಲಿ ಟೀಮ್ ಇಂಡಿಯಾವನ್ನು ಎರಡು ಬಾರಿ ಸೋಲಿಸಿತ್ತು.
ಪಾಕಿಸ್ತಾನದ ಬ್ಯಾಟರ್ ನಿದಾ ದಾರ್ ಭಾರತದ ವಿರುದ್ಧ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಮಹಿಳಾ ಏಷ್ಯಾಕಪ್‌ನಲ್ಲಿ ಯಾವುದೇ ಬ್ಯಾಟರ್ಗಳ ವೇಗದ ಅರ್ಧಶತಕವಾಗಿದೆ. 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಭಾರತದ ಜೆಮಿಮಾ ರಾಡ್ರಿಗಸ್ ದಾಖಲೆಯನ್ನು ನಿದಾ ದಾರ್ ಮುರಿದರು.
ನಿದಾ ದಾರ್ ಅವರು ಪಾಕಿಸ್ತಾನದ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ನಿದಾ ದಾರ್ ಭಾರತದ ವಿರುದ್ಧ 150 ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಗಳಿಸಿದರು.
ಭಾರತ ತಂಡವು ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಸೋತಿರಬಹುದು ಆದರೆ ನಾಯಕಿ ಹರ್ಮನ್‌ಪ್ರೀತ್ ಈಗ ಮಹಿಳಾ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಜೊತೆಗೆ ಏಷ್ಯಾಕಪ್‌ನಲ್ಲಿ 430 ರನ್ ಗಳಿಸಿದ್ದ ಮಿಥಾಲಿ ರಾಜ್ ಅವರ ದಾಖಲೆಯನ್ನು ಹರ್ಮನ್‌ಪ್ರೀತ್ ಮುರಿದಿದ್ದಾರೆ.
Published On - 7:15 pm, Fri, 7 October 22