ಹಾಂಗ್ ಕಾಂಗ್‌ನಲ್ಲಿ ಬುಧವಾರ ನಡೆದ ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ನ ಫೈನಲ್‌ನಲ್ಲಿ ಶ್ವೇತಾ ಸೆಹ್ರಾವತ್ ನೇತೃತ್ವದ ಭಾರತ ಎ ತಂಡ, ಬಾಂಗ್ಲಾದೇಶ ಎ ತಂಡವನ್ನು 31 ರನ್‌ಗಳಿಂದ ಸೋಲಿಸುವುದರೊಂದಿಗೆ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇಡೀ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳನ್ನಾಡಿದ ಟೀಂ ಇಂಡಿಯಾ ಏಷ್ಯಾಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಟೂರ್ನಿಯ ಮೊದ ಪಂದ್ಯದಲ್ಲಿ ಆತಿಥೇಯ ಹಾಂಗ್ಕಾಂಗ್ ತಂಡವನ್ನು ಹೀನಾಯವಾಗಿ ಮಣಿಸಿದ್ದ ಭಾರತ, ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸುಲಭ ಜಯ ದಾಖಲಿಸಿತು.
ಕ್ರಿಕೆಟ್ ಲೋಕಕ್ಕೆ ಭವಿಷ್ಯದ ಮಹಿಳಾ ಕ್ರಿಕೆಟಿಗರನ್ನು ಸೃಷ್ಟಿಸುವ ಸಲುವಾಗಿ ಮೊದಲ ಬಾರಿಗೆ ಈ ಲೀಗ್ ಅನ್ನು ಆಯೋಜನೆ ಮಾಡಲಾಗಿತ್ತು. ನಿಗದಿಯಂತೆ ಈ ಲೀಗ್ನಲ್ಲಿ 15 ಪಂದ್ಯಗಳ ನಡೆಯಬೇಕಾಗಿತ್ತು. ಆದರೆ ಬರೋಬ್ಬರಿ ಎಂಟು ಪಂದ್ಯಗಳು ಮಳೆಯಿಂದಾಗಿ ರದ್ದಾದವು.
ಹೀಗಾಗಿ ಆಡಿದ ಏಕೈಕ ಪಂದ್ಯದಲ್ಲಿ ಅತ್ಯುತ್ತಮ ನೆಟ್ ರನ್ರೇಟ್ ಹೊಂದಿದ್ದ ಭಾರತ ಫೈನಲ್ಗೇರಿತ್ತು. ಅಂತಿಮವಾಗಿ ಏಷ್ಯಾಕಪ್ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಹಲವು ಯುವ ಪ್ರತಿಭೆಗಳು ಸಿಕ್ಕಂತ್ತಾಗಿದೆ. ಅದರಲ್ಲೂ ಮಹಿಳಾ ಪ್ರಿಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುವ ಇಬ್ಬರು ಆಟಗಾರ್ತಿಯರು ಫೈನಲ್ ಪಂದ್ಯದಲ್ಲಿ ಮಿಂಚಿದ್ದು ಇನ್ನಷ್ಟು ವಿಶೇಷವಾಗಿತ್ತು.
ಮಹಿಳಾ ಪ್ರಿಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಶ್ರೇಯಾಂಕ ಪಾಟೀಲ್ ಮತ್ತು ಕನಿಕಾ ಅಹುಜಾ ಕಣಕ್ಕಿಳಿಯುತ್ತಾರೆ. ಚೊಚ್ಚಲ ಡಬ್ಲ್ಯುಪಿಎಲ್ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಾಂಕ ಆಡಿದ ಏಳು ಪಂದ್ಯಗಳಲ್ಲಿ ಬೌಲಿಂಗ್ನಲ್ಲಿ ಆರು ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ 62 ರನ್ ಚಚ್ಚಿದ್ದರು. ಹಾಗೆಯೇ ಕನಿಕಾ ಅಹುಜಾ ಬ್ಯಾಟಿಂಗ್ನಲ್ಲಿ 98 ರನ್ ಹೊಡೆದಿದ್ದರೆ, ಬೌಲಿಂಗ್ನಲ್ಲಿ ಎರಡು ವಿಕೆಟ್ ಪಡೆದಿದ್ದರು.
ಇನ್ನು ಏಷ್ಯಾಕಪ್ ವಿಚಾರಕ್ಕೆ ಬಂದರೆ, ಆಡಿದ 2 ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್ ಪಡೆದು ಮಿಂಚಿದ ಶ್ರೇಯಾಂಕ ಪಾಟೀಲ್ ಪಂದ್ಯಾವಳಿಯ ಆಟಗಾರ್ತಿ ಪ್ರಶಸ್ತಿಯನ್ನು ಬಾಚಿಕೊಂಡರು. ಶ್ರೇಯಾಂಕ ಹಾಂಗ್ಕಾಂಗ್ ವಿರುದ್ಧ ಕೇವಲ 2 ರನ್ ನೀಡಿ 5 ವಿಕೆಟ್ ಪಡೆದರೆ, ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರು.
ಮತ್ತೊಂದೆಡೆ, ಅಹುಜಾ ಅವರು ತಮ್ಮ ಆಲ್‌ರೌಂಡ್ ಪ್ರದರ್ಶನದ ಆಧಾರದ ಮೇಲೆ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 20 ವರ್ಷ ವಯಸ್ಸಿನ ಈ ಎಡಗೈ ಆಟಗಾರ್ತಿ ಫೈನಲ್ ಪಂದ್ಯದಲ್ಲಿ 23 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿದರೆ, ಬೌಲಿಂಗ್ನಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು.
Published On - 2:02 pm, Thu, 22 June 23