ಮಹಿಳಾ ಪ್ರೀಮಿಯರ್ ಲೀಗ್ 2024 ರ ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಆರ್ಸಿಬಿ ಮಹಿಳಾ ಪಡೆ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದೆ. ಡೆಲ್ಲಿ ನೀಡಿದ 113 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ 2 ವಿಕೆಟ್ ಕಳೆದುಕೊಂಡು 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆದರೆ ಮೊದಲ ವಿಕೆಟ್ ಪತನವಾದ ಬಳಿಕ ಡೆಲ್ಲಿ ಲಯ ಕಳೆದುಕೊಂಡಿತು. ಇದರ ಲಾಭ ಪಡೆದ ಆರ್ಸಿಬಿ ಬೌಲರ್ಗಳು ಡೆಲ್ಲಿಯನ್ನು ಅಲ್ಪ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಇನ್ನು ಈ ಪಂದ್ಯದಲ್ಲಿ ಆರ್ಸಿಬಿ ಪರ ಕನ್ನಡತಿ ಶ್ರೇಯಾಂಕಾ ಪಾಟೀಲ್ ಐತಿಹಾಸಿಕ ಸಾಧನೆ ಕೂಡ ಮಾಡಿದರು. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ 21 ವರ್ಷದ ಶ್ರೇಯಾಂಕಾ ಪಾಟೀಲ್ ತಮ್ಮ ಖೋಟಾದ 3.3 ಓವರ್‌ಗಳಲ್ಲಿ 12 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.
ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಸ್ಪೆಲ್ ಮಾಡಿದ ಬೌಲರ್ ಎಂಬ ಹೆಗ್ಗಳಿಕೆಗೆ ಶ್ರೇಯಾಂಕಾ ಪಾಟೀಲ್ ಪಾತ್ರರಾದರು. ಈ ಮೊದಲು ಈ ದಾಖಲೆ ಮುಂಬೈ ಇಂಡಿಯನ್ಸ್‌ನ ಹ್ಯಾಲಿ ಮ್ಯಾಥ್ಯೂಸ್ ಹೆಸರಿನಲ್ಲಿತ್ತು. 2023 ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೇಯ್ಲಿ ಮ್ಯಾಥ್ಯೂಸ್ 4 ಓವರ್‌ಗಳಲ್ಲಿ 5 ರನ್‌ಗಳಿಗೆ 3 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಹೊರತಾಗಿ ಸೋಫಿ ಮೊಲಿನೋ ಕೂಡ ಅದ್ಭುತ ಬೌಲಿಂಗ್ ಮಾಡಿ ತಮ್ಮ ಖೋಟಾದ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ವಿಶೇಷವೆಂದರೆ ಸೋಫಿ ಮೊಲಿನೊ ಒಂದೇ ಓವರ್‌ನಲ್ಲಿ ಎಲ್ಲಾ ಮೂರು ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವೇಗವಾಗಿ ರನ್ ಗಳಿಸುತ್ತಿತ್ತು. ಆದರೆ ಸೋಫಿ ಮೊಲಿನೊ ಒಂದೇ ಓವರ್‌ನಲ್ಲಿ ಇಡೀ ಆಟವನ್ನು ಬದಲಾಯಿಸಿದರು.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯಂತ ಯಶಸ್ವಿ ಬ್ಯಾಟರ್ ಎನಿಸಿಕೊಂಡ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 27 ಎಸೆತಗಳಲ್ಲಿ 44 ರನ್ಗಳ ಸ್ಫೋಟಕ ಆಟವಾಡಿದರು. ಈ ವೇಳೆ ಅವರು 2 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ನಂತರ ನಾಯಕಿ ಮೆಗ್ ಲ್ಯಾನಿಂಗ್ 23 ರನ್ ಕೊಡುಗೆ ನೀಡಿದರು.
Published On - 11:20 pm, Sun, 17 March 24