WPL Retention 2026: ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ; 5 ತಂಡಗಳಲ್ಲಿ ಉಳಿದುಕೊಂಡವರ ಪಟ್ಟಿ ಇಲ್ಲಿದೆ
WPL Retained Players List 2026: ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜು ನವೆಂಬರ್ 27ರಂದು ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ, ತಂಡಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಅಂತಿಮಗೊಳಿಸಿವೆ. ಮುಂಬೈ ಇಂಡಿಯನ್ಸ್ 5, ಆರ್‌ಸಿಬಿ 4, ಡೆಲ್ಲಿ ಕ್ಯಾಪಿಟಲ್ಸ್ 5 ಆಟಗಾರ್ತಿಯರನ್ನು ಉಳಿಸಿಕೊಂಡಿವೆ. ಗುಜರಾತ್ 2, ಯುಪಿ ವಾರಿಯರ್ಸ್ ಒಬ್ಬರನ್ನು ಮಾತ್ರ ಉಳಿಸಿಕೊಂಡಿದೆ. ದೀಪ್ತಿ ಶರ್ಮಾ ಬಿಡುಗಡೆಯಾಗಿದ್ದು ಆಶ್ಚರ್ಯ ತಂದಿದೆ.
Updated on:Nov 05, 2025 | 10:07 PM

ಮಹಿಳಾ ಪ್ರಿಮಿಯರ್ ಲೀಗ್ನ 4ನೇ ಆವೃತ್ತಿಯ ಮೆಗಾ ಹರಾಜು ಇದೇ ತಿಂಗಳ 27 ರಂದು ನಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ತಂಡದಲ್ಲಿ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಲು ನವೆಂಬರ್ 5 ಅನ್ನು ಕೊನೆಯ ದಿನವಾಗಿ ನಿಗದಿ ಮಾಡಲಾಗಿದೆ. ಹೀಗಾಗಿ ಎಲ್ಲಾ 5 ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ತಂಡದಲ್ಲಿ ಐವರು ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಅವರಲ್ಲಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸ್ಕಿವರ್-ಬ್ರಂಟ್, ಅಮನ್‌ಜೋತ್ ಕೌರ್, ಜಿ ಕಮಿಲಿನಿ ಮತ್ತು ಹೇಲಿ ಮ್ಯಾಥ್ಯೂಸ್ ಸೇರಿದ್ದಾರೆ.

ಹಾಗೆಯೇ ಡಬ್ಲ್ಯುಪಿಎಲ್ನ ಎರಡನೇ ಆವೃತ್ತಿಯ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಲ್ವರು ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅವರುಗಳಲ್ಲಿ ನಾಯಕಿ ಸ್ಮೃತಿ ಮಂಧಾನ, ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್ ಎಲಿಸ್ ಪೆರ್ರಿ, ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಸೇರಿದ್ದಾರೆ.

ಮೂರು ಬಾರಿ ಫೈನಲ್ಗೇರಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ ಐವರು ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅವರುಗಳಲ್ಲಿ ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಮರಿಜಾನ್ನೆ ಕಪ್,ಅನ್ನಾಬೆಲ್ ಸದರ್ಲ್ಯಾಂಡ್, ನಿಕಿ ಪ್ರಸಾದ್.

ಉಳಿದಂತೆ ಗುಜರಾತ್ ಜೈಂಟ್ಸ್ ಫ್ರಾಂಚೈಸಿ ಕೇವಲ ಇಬ್ಬರು ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿಯಾರದ ಆಶ್ಲೀ ಗಾರ್ಡ್ನರ್ ಮತ್ತು ಬೆತ್ ಮೂನಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.

ಯುಪಿ ವಾರಿಯರ್ಸ್ ಫ್ರಾಂಚೈಸಿ ಕೇವಲ ಒಬ್ಬ ಆಟಗಾರ್ತಿಯನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ಅನ್ಕ್ಯಾಪ್ಡ್ ಆಟಗಾರ್ತಿಯಾದ ಶ್ವೇತಾ ಸೆಹ್ರಾವತ್ ಅವರನ್ನು ಉಳಿಸಿಕೊಂಡಿರುವ ವಾರಿಯರ್ಸ್, ಭಾರತದ ಇತ್ತೀಚಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೀಪ್ತಿ ಶರ್ಮಾ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
Published On - 10:05 pm, Wed, 5 November 25




