- Kannada News Photo gallery Cricket photos WTC Final 2023 Ajinkya Rahane Becomes 8th Indian To Achieve Elusive Feat
WTC Final 2023: 5000 ರನ್, 100 ಕ್ಯಾಚ್! ಫೈನಲ್‌ನಲ್ಲಿ ರಹಾನೆ ಬರೆದ ದಾಖಲೆಗಳಿವು
WTC Final 2023: ಭಾರತದ ಪರ ಬಾಲಂಗೋಚಿಗಳ ಜೊತೆ ಕೆಚ್ಚೆದೆಯ ಬ್ಯಾಟಿಂಗ್ ಮಾಡುತ್ತಿರುವ ಅಜಿಂಕ್ಯ ರಹಾನೆ, ಟೀಂ ಇಂಡಿಯಾವನ್ನು ಸಂಕಷ್ಟದ ಪರಿಸ್ಥಿತಿಯಿಂದ ಪಾರು ಮಾಡಲು ಯತ್ನಿಸುತ್ತಿದ್ದಾರೆ.
Updated on: Jun 09, 2023 | 5:16 PM

ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಿಂದಲೂ ಆಸೀಸ್ ಎದುರು ಕೊಂಚ ಹಿನ್ನಡೆಯಲ್ಲಿದೆ. ಮೊದಲು ಆಸೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಎಡವಿದ ಭಾರತ ಇದೀಗ ಬ್ಯಾಟಿಂಗ್ನಲ್ಲೂ ಹಳಿತಪ್ಪಿದೆ.

ಆದರೆ ಭಾರತದ ಪರ ಬಾಲಂಗೋಚಿಗಳ ಜೊತೆ ಕೆಚ್ಚೆದೆಯ ಬ್ಯಾಟಿಂಗ್ ಮಾಡುತ್ತಿರುವ ಅಜಿಂಕ್ಯ ರಹಾನೆ, ಟೀಂ ಇಂಡಿಯಾವನ್ನು ಸಂಕಷ್ಟದ ಪರಿಸ್ಥಿತಿಯಿಂದ ಪಾರು ಮಾಡಲು ಯತ್ನಿಸುತ್ತಿದ್ದಾರೆ. ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಮ್ಮ ಟೆಸ್ಟ್ ವೃತ್ತಿ ಜೀವನದ 26ನೇ ಅರ್ಧಶತಕ ಸಿಡಿಸಿದ್ದಾರೆ.

ತಮ್ಮ ಇನ್ನಿಂಗ್ಸ್ನಲ್ಲಿ 1 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 92 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ರಹಾನೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ 5000 ರನ್ ಕೂಡ ರಹಾನೆ ಪೂರೈಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ರಹಾನೆ, ಎರಡೂ ಇನ್ನಿಂಗ್ಸ್‌ಗಳಲ್ಲಿ ಫ್ಲಾಪ್ ಆಗಿದ್ದರು. ಇದಾದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಅರ್ಧಶತಕದೊಂದಿಗೆ ರಹಾನೆ ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ಇದರೊಂದಿಗೆ ಫೀಲ್ಡಿಂಗ್ನಲ್ಲ್ಲೂ ಶತಕ ಪೂರೈಸಿರುವ ರಹಾನೆ, ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಕ್ಯಾಚ್ ಹಿಡಿಯುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಕ್ಯಾಚ್ಗಳ ಶತಕ ಪೂರೈಸಿದರು. ರಹಾನೆಗೂ ಮೊದಲು ವಿವಿಎಸ್ ಲಕ್ಷ್ಮಣ್ ( 135 ಕ್ಯಾಚ್), ಸಚಿನ್ ತೆಂಡೂಲ್ಕರ್ (115), ವಿರಾಟ್ ಕೊಹ್ಲಿ (109), ಸುನಿಲ್ ಗವಾಸ್ಕರ್ (108), ಮೊಹಮ್ಮದ್ ಅಜರುದ್ದೀನ್ (105) ಟೆಸ್ಟ್ನಲ್ಲಿ 100 ಕ್ಯಾಚ್ ಹಿಡಿದ ದಾಖಲೆ ಬರೆದಿದ್ದಾರೆ.

ಸದ್ಯ ಟೀಂ ಇಂಡಿಯಾವನ್ನು ಫಾಲೋ ಆನ್ನಿಂದ ಪಾರು ಮಾಡಲು ಶಾರ್ದೂಲ್ ಠಾಕೂರ್ ಜೊತೆ ಅವಶ್ಯಕ ಜೊತೆಯಾಟವನ್ನಾಡುತ್ತಿರುವ ರಹಾನೆ ಇಬ್ಬರ ಜೊತೆಯಾಟವನ್ನು 100ರ ಗಡಿ ದಾಟಿಸಿದ್ದಾರೆ. ಮೊದಲ ಸೆಷನ್ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 260 ರನ್ ಕಲೆ ಹಾಕಿದೆ.




