WTC Final 2023: ಔಟಾ ಅಥವಾ ನಾಟೌಟಾ: ಹೊಸ ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು..!
Shubman Gill's Controversial Catch: ಒಟ್ಟಿನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಹೊಸ ವಿವಾದವನ್ನು ಹುಟ್ಟುಹಾಕಿದೆ.
Updated on: Jun 10, 2023 | 10:08 PM

WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೀಡಾಗಿದೆ. ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ನೀಡಿದ 444 ರನ್ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 41 ರನ್ ಪೇರಿಸಿದ್ದಾಗ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಸಾಗಿತು. ತಕ್ಷಣವೇ ಅತ್ಯುತ್ತಮ ಡೈವಿಂಗ್ ಮೂಲಕ ಕ್ಯಾಮರೋನ್ ಗ್ರೀನ್ ಎಡಗೈಯಲ್ಲಿ ಕ್ಯಾಚ್ ಹಿಡಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ಮನವಿ ಮಾಡಿದರು.

ಹಲವು ಬಾರಿ ರೀಪ್ಲೆ ಮಾಡಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಆದರೆ ರೀಪ್ಲೆ ವೇಳೆಯಲ್ಲೇ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಇದಾಗ್ಯೂ ಅಂಪೈರ್ ತೀರ್ಪಿಗೆ ತಲೆಬಾಗಿ ಶುಭ್ಮನ್ ಗಿಲ್ (18) ನಿರಾಸೆಯೊಂದಿಗೆ ಮೈದಾನವನ್ನು ತೊರೆದರು.

ಇದೀಗ ಟಿವಿಯಲ್ಲಿ ಪರಿಶೀಲಿಸಿದ ಬಳಿಕ ಕೂಡ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ಬೆರಳುಗಳ ಎಡೆಯಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಕಂಡು ಬಂದರೂ ಮೂರನೇ ಅಂಪೈರ್ಗೆ ಕಾಣಲಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
























