WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ. ಜೂನ್ 7 ರಿಂದ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ಆರಂಭವಾಗಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ.
ಈಗಾಗಲೇ ಟೀಮ್ ಇಂಡಿಯಾ ಈ ಮಹತ್ವದ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇದಾಗ್ಯೂ ಈ ಬಾರಿ ಭಾರತದ ಪರ ಮೂವರು ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ.
ಕಾರು ಅಪಘಾತದಿಂದ ಗಾಯಗೊಂಡಿರುವ ರಿಷಭ್ ಪಂತ್ ತಂಡದಿಂದ ಹೊರಗುಳಿದಿದ್ದರೆ, ಐಪಿಎಲ್ ವೇಳೆ ಗಾಯಗೊಂಡಿರುವ ಕೆಎಲ್ ರಾಹುಲ್ ಈ ಬಾರಿ ಕಣಕ್ಕಿಳಿಯುತ್ತಿಲ್ಲ. ಹಾಗೆಯೇ ಗಾಯಗೊಂಡಿರುವ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಅಲಭ್ಯರಾಗಿದ್ದಾರೆ.
ಇಲ್ಲಿ ರಾಹುಲ್ ಬದಲಿಗೆ ಇಶಾನ್ ಕಿಶನ್ ಸ್ಥಾನ ಪಡೆದರೆ, ರಿಷಭ್ ಪಂತ್ ಸ್ಥಾನದಲ್ಲಿ ಕೆಎಸ್ ಭರತ್ ಇದ್ದಾರೆ. ಹಾಗೆಯೇ ಜಸ್ಪ್ರೀತ್ ಬುಮ್ರಾ ಜಾಗದಲ್ಲಿ ಉಮೇಶ್ ಯಾದವ್ ತಂಡದಲ್ಲಿದ್ದಾರೆ. ಹೀಗಾಗಿ ಬಲಿಷ್ಠ ಪಡೆಯನ್ನೇ ಟೀಮ್ ಇಂಡಿಯಾ ಕಣಕ್ಕಿಳಿಸಲಿದೆ.
ಇನ್ನು 15 ಸದಸ್ಯರಲ್ಲದೆ ಮೂವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿರಿಸಲಾಗಿದೆ. ಇವರಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳಾದರೆ ಒಬ್ಬರು ಬೌಲರ್. ಅದರಂತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಆಯ್ಕೆಯಾದ ಮೀಸಲು ಆಟಗಾರರು ಈ ಕೆಳಗಿನಂತಿದೆ..
ಯಶಸ್ವಿ ಜೈಸ್ವಾಲ್: ಮುಂಬೈ ಪರ ರಣಜಿ ಕ್ರಿಕೆಟ್ ಆಡುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಇದೇ ಮೊದಲ ಬಾರಿ ಟೀಮ್ ಇಂಡಿಯಾ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಖೇಶ್ ಕುಮಾರ್: ಬಿಹಾರ್ ಮೂಲದ ಬಲಗೈ ವೇಗಿ ಮುಖೇಶ್ ಕುಮಾರ್ ಭಾರತ ತಂಡದ ಹೆಚ್ಚುವರಿ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಸೂರ್ಯಕುಮಾರ್ ಯಾದವ್: ಟೀಮ್ ಇಂಡಿಯಾ ಪರ ಏಕೈಕ ಟೆಸ್ಟ್ ಪಂದ್ಯವಾಡಿರುವ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಈ ಬಾರಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್).