WTC final: ಶ್ರೀಲಂಕಾ ಕೈಯಲ್ಲಿ ಟೀಮ್ ಇಂಡಿಯಾದ ಫೈನಲ್ ಭವಿಷ್ಯ
WTC final scenarios: WTC final 2025: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯವು ಜೂನ್ 11 ರಿಂದ 15 ರವರಗೆ ನಡೆಯಲಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ತಂಡ ಅರ್ಹತೆ ಪಡೆದುಕೊಂಡಿದೆ. ಇದೀಗ ಫೈನಲ್ಗೇರುವ 2ನೇ ತಂಡದ ರೇಸ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿದ್ದು, ಉಭಯ ತಂಡಗಳಲ್ಲಿ ಒಂದು ಟೀಮ್ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದೆ.
Updated on: Dec 31, 2024 | 7:21 AM

ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋತಿರುವ ಭಾರತ ತಂಡಕ್ಕೆ WTC ಫೈನಲ್ಗೆ ಪ್ರವೇಶಿಸಲು ಇದೀಗ ಶ್ರೀಲಂಕಾವನ್ನು ಆಶ್ರಯಿಸಬೇಕಾದ ಪರಿಸ್ಥಿತಿಗೆ ಎದುರಾಗಿದೆ. ಆದರೆ ಅದಕ್ಕೂ ಮುನ್ನ ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕು.

ಪ್ರಸ್ತುತ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ 52.78% ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, 61.46% ಪಾಯಿಂಟ್ಸ್ನೊಂದಿಗೆ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಇನ್ನು 66.67% ಅಂಕಗಳಿಸಿರುವ ಸೌತ್ ಆಫ್ರಿಕಾ ತಂಡವು ಈಗಾಗಲೇ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ರೇಸ್ ಮುಂದುವರೆದಿದ್ದು, ಇಲ್ಲಿ ಉಭಯ ತಂಡಗಳ ಪಾಲಿಗೆ ಸಿಡ್ನಿ ಟೆಸ್ಟ್ ನಿರ್ಣಾಯಕ.

ಏಕೆಂದರೆ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ 55.26% ಅಂಕಗಳನ್ನು ಪಡೆಯಲಿದೆ. ಇದೇ ವೇಳೆ ಆಸ್ಟ್ರೇಲಿಯಾ ತಂಡದ ಅಂಕ 57.84% ಕ್ಕೆ ಕುಸಿಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಎದುರು ನೋಡಬೇಕು.

ಈ ಸರಣಿಯ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ತಂಡವು ಒಂದು ಜಯ ಹಾಗೂ ಒಂದು ಡ್ರಾ ಅಥವಾ ಎರಡು ಪಂದ್ಯಗಳಲ್ಲೂ ಗೆಲುವು ದಾಖಲಿಸಿದರೆ ಟೀಮ್ ಇಂಡಿಯಾ ಫೈನಲ್ಗೇರುವುದು ಖಚಿತ. ಅಂದರೆ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 1-0 ಅಥವಾ 2-0 ಅಂತರದಿಂದ ಸರಣಿ ಗೆದ್ದರೆ, ಆಸ್ಟ್ರೇಲಿಯಾ ತಂಡದ ಅಂಕ 53.50% ಕ್ಕೆ ಕುಸಿಯಲಿದೆ. ಇತ್ತ 55.26% ಅಂಕಗಳನ್ನು ಹೊಂದಿರುವ ಟೀಮ್ ಇಂಡಿಯಾ ಫೈನಲ್ಗೆ ಅರ್ಹತೆ ಪಡೆಯಲಿದೆ.

ಹೀಗಾಗಿಯೇ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭವಿಷ್ಯ ಶ್ರೀಲಂಕಾ ತಂಡದ ಕೈಯಲ್ಲಿದೆ ಎನ್ನಬಹುದು. ಆದರೆ ಅದಕ್ಕೂ ಮುನ್ನ ಭಾರತ ತಂಡವು ಸಿಡ್ನಿ ಟೆಸ್ಟ್ನಲ್ಲಿ ಗೆಲ್ಲಲಿದೆಯಾ ಕಾದು ನೋಡಬೇಕಿದೆ. ಒಂದು ವೇಳೆ ಟೀಮ್ ಇಂಡಿಯಾ ಸಿಡ್ನಿ ಟೆಸ್ಟ್ನಲ್ಲಿ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಬಹುತೇಕ ಖಚಿತವಾಗಲಿದೆ.
