- Kannada News Photo gallery Cricket photos WTC points table: Pakistan finishes bottom of World Test Championship
WTC ಅಂತಿಮ ಅಂಕಪಟ್ಟಿ ಪ್ರಕಟ: ಪಾಕಿಸ್ತಾನ್ ತಂಡಕ್ಕೆ ಕೊನೆಯ ಸ್ಥಾನ
WTC Points Table: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುಕ್ತಾಯದೊಂದಿಗೆ 2023-2025 ರ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಗೆ ತೆರೆಬಿದ್ದಿದೆ. ಇನ್ನುಳಿದಿರುವುದು ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವಣ ಫೈನಲ್ ಪಂದ್ಯ ಮಾತ್ರ. ಜೂನ್ 11 ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿರುವ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಣಸಲಿದೆ.
Updated on: Feb 10, 2025 | 2:30 PM

ವಿಶ್ವ ಟೆಸ್ಟ್ ಚಾಂಪಿಯನ್ಸ್ 2023-25ರ ಸರಣಿ ಮುಕ್ತಾಯಗೊಂಡಿದೆ. ಇನ್ನುಳಿದಿರುವುದು ಫೈನಲ್ ಪಂದ್ಯ ಮಾತ್ರ. ಈ ಸರಣಿ ಮುಕ್ತಾಯದೊಂದಿಗೆ ನೂತನ WTC ಅಂಕ ಪಟ್ಟಿ ಪ್ರಕಟಗೊಂಡಿದೆ. ಹೊಸ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಅಂದರೆ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಪಾಕಿಸ್ತಾನ್ ತಂಡವು ಕೊನೆಯ ಸ್ಥಾನ ಪಡೆದುಕೊಂಡಿದೆ. WTC ಸರಣಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಪಾಕ್ ಪಡೆ ಗೆದ್ದಿರುವುದು ಕೇವಲ 5 ಮ್ಯಾಚ್ಗಳಲ್ಲಿ ಮಾತ್ರ. ಅಲ್ಲದೆ 9 ಪಂದ್ಯಗಳಲ್ಲಿ ಸೋಲನುಭವಿಸಿದೆ.

ಈ 9 ಪಂದ್ಯಗಳಲ್ಲಿನ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು WTC ಪಾಯಿಂಟ್ಸ್ ಟೇಬಲ್ನಲ್ಲಿ ಕೇವಲ 27.98 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ 2023-25ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡ ಎನಿಸಿಕೊಂಡಿದೆ.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೌತ್ ಆಫ್ರಿಕಾ ತಂಡ. ಆಫ್ರಿಕನ್ ಪಡೆ ಆಡಿದ 12 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದೆ. ಅಲ್ಲದೆ ಒಂದು ಮ್ಯಾಚ್ ಅನ್ನು ಡ್ರಾ ಮಾಡಿಕೊಳ್ಳುವ ಮೂಲಕ ಒಟ್ಟು 69.44% ಅಂಕಗಳನ್ನು ಪಡೆದು ಅಗ್ರಸ್ಥಾನ ಅಲಂಕರಿಸಿದೆ. ಈ ಅಗ್ರಸ್ಥಾನದೊಂದಿಗೆ ಸೌತ್ ಆಫ್ರಿಕಾ WTC ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.

ಹಾಗೆಯೇ ದ್ವಿತೀಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ. ಆಸೀಸ್ ಪಡೆ ಈ ಬಾರಿಯ WTC ಸರಣಿಯಲ್ಲಿ ಒಟ್ಟು 19 ಪಂದ್ಯಗಳನ್ನಾಡಿದ್ದು, ಈ ವೇಳೆ 13 ಜಯ, 4 ಸೋಲು ಹಾಗೂ 2 ಡ್ರಾನೊಂದಿಗೆ 67.540% ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿದೆ.

ಇನ್ನು ಭಾರತ ತಂಡವು ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಟೀಮ್ ಇಂಡಿಯಾ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಒಟ್ಟು 19 ಪಂದ್ಯಗಳನ್ನಾಡಿದ್ದು, ಈ ವೇಳೆ 9 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು 2 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 8 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ 50.00% ಅಂಕಗಳನ್ನು ಪಡೆದು ಫೈನಲ್ಗೇರುವಲ್ಲಿ ವಿಫಲವಾಗಿದೆ.

ಇನ್ನುಳಿದಂತೆ ನ್ಯೂಝಿಲೆಂಡ್ (48.21%) ತಂಡದ 4ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ (43.18%) 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 6ನೇ ಸ್ಥಾನದಲ್ಲಿ ಶ್ರೀಲಂಕಾ (38.46%) ತಂಡವಿದ್ದು, 7ನೇ ಸ್ಥಾನದಲ್ಲಿ ಬಾಂಗ್ಲಾದೇಶ್ (31.25%) ತಂಡವಿದೆ. ಇನ್ನು ವೆಸ್ಟ್ ಇಂಡೀಸ್ (28.21%) 8ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ್ (27.98%) ಕೊನೆಯ ಸ್ಥಾನದಲ್ಲಿದೆ.
