
ಟೀಮ್ ಇಂಡಿಯಾ (Team India) ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಂಚಲನ ಸೃಷ್ಟಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ 57 ರನ್ ಬಾರಿಸುವ ಮೂಲಕ ಯಶಸ್ವಿ ಟೆಸ್ಟ್ ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಿದ್ದಾರೆ.

ವಿಶೇಷ ಎಂದರೆ ಈ ಸಾವಿರ ರನ್ಗಳಲ್ಲಿ ಯಶಸ್ವಿ ಬ್ಯಾಟ್ನಿಂದ ಬರೋಬ್ಬರಿ 29 ಸಿಕ್ಸ್ಗಳು ಮೂಡಿಬಂದಿವೆ. ಅಂದರೆ 9 ಟೆಸ್ಟ್ ಪಂದ್ಯಗಳ ಮೂಲಕ ಯಶಸ್ವಿ ಜೈಸ್ವಾಲ್ ಇದುವರೆಗೆ 29 ಸಿಕ್ಸ್ಗಳನ್ನು ಬಾರಿಸಿದ್ದಾರೆ.

ಈ 29 ಸಿಕ್ಸ್ಗಳಲ್ಲಿ 26 ಸಿಕ್ಸರ್ಗಳು ಮೂಡಿಬಂದಿರುವುದು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎಂಬುದು ವಿಶೇಷ. ಇದೀಗ ಈ 26 ಸಿಕ್ಸ್ಗಳೊಂದಿಗೆ ಯಶಸ್ವಿ ಭರ್ಜರಿ ದಾಖಲೆಯನ್ನು ಬರೆದಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆ ಮುರಿಯುವ ಮೂಲಕ.

ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ ತಂಡವೊಂದರ ವಿರುದ್ಧ ಅತ್ಯಧಿಕ ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾ 25 ಸಿಕ್ಸ್ ಬಾರಿಸುವ ಮೂಲಕ ಸಚಿನ್ ಈ ವಿಶೇಷ ದಾಖಲೆ ಬರೆದಿದ್ದರು.

ಇದೀಗ ಇಂಗ್ಲೆಂಡ್ ವಿರುದ್ಧ 26 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ತಂಡವೊಂದರ ವಿರುದ್ಧ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ ಇಂಗ್ಲೆಂಡ್ ವಿರುದ್ಧ 712 ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್ 2ನೇ ಇನಿಂಗ್ಸ್ನಲ್ಲಿ 63 ರನ್ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗವಾಸ್ಕರ್ 774 ರನ್ ಕಲೆಹಾಕಿದ್ದರು. ಇದೀಗ ಈ ಐತಿಹಾಸಿಕ ದಾಖಲೆ ಮುರಿಯಲು ಯಶಸ್ವಿ ಜೈಸ್ವಾಲ್ಗೆ ಕೇವಲ 63 ರನ್ಗಳ ಅವಶ್ಯಕತೆಯಿದೆ.