Rohit Sharma: 3ನೇ ದಿನದಾಟದಲ್ಲಿ ಮೈದಾನಕ್ಕಿಳಿಯದ ರೋಹಿತ್ ಶರ್ಮಾ
Rohit Sharma: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಹಿಟ್ಮ್ಯಾನ್ ಶತಕ ಸಿಡಿಸಿ ಮಿಂಚಿದ್ದರು. ಆದರೆ ಮೂರನೇ ದಿನದಾಟದ ಫೀಲ್ಡಿಂಗ್ ವೇಳೆ ರೋಹಿತ್ ಶರ್ಮಾ ಕಾಣಿಸಿಕೊಂಡಿಲ್ಲ.
Updated on:Mar 09, 2024 | 12:49 PM

ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೊರಗುಳಿದಿದ್ದಾರೆ. 2ನೇ ದಿನದಾಟದಲ್ಲಿ ಶತಕ ಸಿಡಿಸಿ ಮಿಂಚಿದ್ದ ಹಿಟ್ಮ್ಯಾನ್ ಬೆನ್ನು ನೋವಿನ ಕಾರಣ ಶನಿವಾರ ಮೈದಾನಕ್ಕಿಳಿದಿಲ್ಲ.

ಟೀಮ್ ಇಂಡಿಯಾದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರೋಹಿತ್ ಶರ್ಮಾ 162 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 103 ರನ್ ಬಾರಿಸಿದ್ದರು. ಈ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಇದೇ ಕಾರಣದಿಂದಾಗಿ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಫೀಲ್ಡಿಂಗ್ ವೇಳೆ ರೋಹಿತ್ ಶರ್ಮಾ ಕಾಣಿಸಿಕೊಂಡಿಲ್ಲ.

ಇನ್ನು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಉಪನಾಯಕ ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಅದರಂತೆ ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿದಿದೆ. ಅಲ್ಲದೆ ಇಂಗ್ಲೆಂಡ್ ತಂಡದ ದ್ವಿತೀಯ ಇನಿಂಗ್ಸ್ನಲ್ಲಿ ಭಾರತೀಯ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಝಾಕ್ ಕ್ರಾಲಿ (79) ಅವರ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 218 ರನ್ ಕಲೆಹಾಕಿತ್ತು. ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (103) ಹಾಗೂ ಶುಭ್ಮನ್ ಗಿಲ್ (110) ಶತಕ ಸಿಡಿಸಿದ್ದರು.

ಈ ಶತಕಗಳ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 477 ರನ್ ಕಲೆಹಾಕಿದೆ. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 259 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡುತ್ತಿದೆ. ಅಲ್ಲದೆ ಭೋಜನಾ ವಿರಾಮದ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 103 ರನ್ ಕಲೆಹಾಕಿದೆ.
Published On - 12:26 pm, Sat, 9 March 24
